

ಬೆಂಗಳೂರು: ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಗ್ಬಾಸ್ ಸೀಸನ್ 8 ಭಾನುವಾರಕ್ಕೆ ಮುಕ್ತಾಯವಾಗಿದೆ. ಬಣ್ಣ ಬಣ್ಣದ ದೀಪಗಳಿಂದ ಸದಾ ಅಲಂಕೃತವಾಗಿ ಕಂಗೊಳಿಸುತ್ತಿದ್ದ ಬಿಗ್ ಮನೆಯ ದೀಪಗಳು ಆರಿವೆ. ಎಲ್ಲರ ಹಾವ ಭಾವ, ಭಂಗಿಯನ್ನು ಸೆರೆಹಿಡಿಯುತ್ತಿದ್ದ ಕ್ಯಾಮರಾಗಳು ಕಣ್ಣುಮುಚ್ಚಿವೆ.. ಆದರೆ, ಇದೇ ಬಿಗ್ಬಾಸ್ ವೀಕ್ಷಕರಿಗೆ ಇಲ್ಲೊಂದು ಸಿಹಿ ಸುದ್ದಿಯೂ ಇದೆ. ಅದೇನೆಂದರೆ, ಬಿಗ್ಬಾಸ್ ಚಿತ್ರೀಕರಣ ಮುಗಿದರೂ, ಅದರ ಪ್ರಸಾರ ಇನ್ನೂ ಮುಗಿದಿಲ್ಲ.
ಅಂದರೆ, ಮುಂದಿನ ಒಂದು ವಾರದವರೆಗೂ ಬಿಗ್ಬಾಸ್ ಏಪಿಸೋಡ್ಗಳು ಪ್ರಸಾರವಾಗುವ ಸಾಧ್ಯತೆ ಇದೆ. ಭಾನುವಾರ ಎಂದಿನಂತೆ ಒಬ್ಬೊಬ್ಬರನ್ನೆ ಮನೆಯಿಂದ ಹೊರಗೆ ಕರೆಸಿ ಮಾರ್ಗಸೂಚಿ ಪ್ರಕಾರ ಕೋವಿಡ್ ಪರೀಕ್ಷೆ ಮಾಡಿಸಿ, ಅವರನ್ನು ಸುರಕ್ಷಿತವಾಗಿ ಅವರವರ ಮನೆಗಳಿಗೆ ತಲುಪಿಸುವ ಕಾರ್ಯವಾಗಿದೆ. ಹಾಗೆ ಒಬ್ಬೊಬ್ಬರ ಕೋವಿಡ್ ಪರೀಕ್ಷೆಗೆ ಒಂದು ಗಂಟೆ ಅವಧಿ ತಗುಲಿರುವುದರಿಂದ, ಆ ಬಿಡುವಿನಲ್ಲಿ ಇನ್ನುಳಿದ ಮನೆಯವರ ಎಂದಿನ ಮಾತುಕತೆ, ಹರಟೆ ಎಲ್ಲವನ್ನೂ ಮುಂದಿನ ಒಂದು ವಾರ ಕಲರ್ಸ್ ಕನ್ನಡ ಪ್ರಸಾರ ಮಾಡಲಿದೆ.