

ಮುಂಬೈ: 'ದಿ ಕಪಿಲ್ ಶರ್ಮ ಶೋ' ಕಾರ್ಯಕ್ರಮದಿಂದ ಜನಪ್ರಿಯ ನಟಿ ಭಾರತಿ ಸಿಂಗ್ ಅವರನ್ನು ಕಿತ್ತು ಹಾಕಲಾಯ್ತಾ?
ಇಂಥದ್ದೊಂದು ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಅದೇನೆಂದರೆ, ಕಾಮಿಡಿಗೆ ಹೆಸರುವಾಸಿಯಾಗಿರುವ ಭಾರತಿ ಸಿಂಗ್ ಅವರಿಗೆ ಡ್ರಗ್ಸ್ ಜಾಲದೊಂದಿಗೆ ನಂಟಿದೆ ಎಂಬ ಕಾರಣಕ್ಕೆ ನಾಕೋರ್ಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ಇತ್ತೀಚೆಗಷ್ಟೇ ಅರೆಸ್ಟ್ ಮಾಡಿದ್ದರು. ಆದರೆ, ಒಂದೇ ದಿನಕ್ಕೆ ಭಾರತಿ ಮತ್ತು ಆಕೆಯ ಪತಿ ಹರ್ಷ್ಗೆ ಬೇಲ್ ಸಿಕ್ಕಿದ್ದರಿಂದ ಇಬ್ಬರೂ ಹೊರಗೆ ಬಂದಿದ್ದರು.
ಆದರೆ, ಡ್ರಗ್ಸ್ ವಿಷಯದಲ್ಲಿ ಕಳಂಕಿತರಾಗಿರುವ ಭಾರತಿ ಸಿಂಗ್ ಅವರನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸಲಾಗಿದೆ ಎಂಬಂಥ ಸುದ್ದಿಯೊಂದು ಒಂದೆರೆಡು ದಿನಗಳಿಂದ ವಿಪರೀತವಾಗಿ ಕೇಳಿ ಬರುತ್ತಿದೆ. ಹಾಗಾದರೆ, ಭಾರತಿ ಕೆಲಸ ಕಳೆದುಕೊಂಡರಾ ಎಂಬ ಪ್ರಶ್ನೆ ಬರಬಹುದು.
ಖಂಡಿತಾ ಇಲ್ಲ ಎಂಬ ಉತ್ತರ 'ದಿ ಕಪಿಲ್ ಶರ್ಮ ಶೋ'ನಲ್ಲಿ ಭಾರತಿ ಜತೆಗೆ ನಟಿಸುತ್ತಿರುವ ಕೃಷ್ಣ ಅವರಿಂದ ಬರುತ್ತದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಆ ತರಹ ಸುದ್ದಿ ನಾನು ಇದುವರೆಗೂ ಕೇಳಿಲ್ಲ. ಹಾಗೆಯೇ ಪ್ರೊಡಕ್ಷನ್ ಹೌಸ್ ಆಗಲೀ, ಚಾನಲ್ ಕಡೆಯಿಂದಾಗಲೀ ಭಾರತಿ ಅವರನ್ನು ಕಿತ್ತು ಹಾಕಬೇಕು ಎಂಬ ಯಾವುದೇ ಆದೇಶ ಬಂದಿಲ್ಲ' ಎನ್ನುತ್ತಾರೆ.
ಇದನ್ನೂ ಓದಿ: ಬುಧವಾರ ಹೊಸ ಚಿತ್ರ ಘೋಷಿಸಲಿರುವ ಹೊಂಬಾಳೆ ಫಿಲಂಸ್ …
ಈ ಕುರಿತು ಮಾತನಾಡಿರುವ ಮತ್ತೊಬ್ಬ ನಟ ಕಿಕು ಶಾರ್ದಾ, 'ನಿನ್ನೆಯಷ್ಟೇ ಚಿತ್ರೀಕರಣ ಮಾಡಿದ್ದೇವೆ ಮತ್ತು ನಿನ್ನೆಯ ಚಿತ್ರೀಕರಣದಲ್ಲಿ ಭಾರತಿ ಸಹ ಇದ್ದರು. ಹಾಗಾಗಿ ಅವರನ್ನು ಕಾರ್ಯಕ್ರಮದಿಂದ ಕಿತ್ತು ಹಾಕಲಾಗಿದೆ ಎಂಬ ಸುದ್ದಿಗಳೆಲ್ಲಾ ಅಪ್ಪಟ ಸುಳ್ಳು' ಎಂದು ಅವರು ಹೇಳಿದ್ದಾರೆ.