

ಬೆಂಗಳೂರು: ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರವು ಇಂದು ಜಿ 5ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗ್ಗೆ ಪುನೀತ್ ರಾಜಕುಮಾರ್ ಅವರಿಗೆ ಮೊದಲಿನಿಂದಲೂ ವಿಶೇಷವಾದ ಪ್ರೀತಿ ಇತ್ತಂತೆ. ಚಿತ್ರದ ಪ್ರೀ-ರಿಲೀಸ್ ಇವೆಂಟ್ಗೂ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು, ಚಿತ್ರವನ್ನು ಮೊದಲ ದಿನವೇ ನೋಡುವುದಾಗಿ ಹೇಳಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.
ಈಗ ‘ಭಜರಂಗಿ 2’ ಚಿತ್ರವನ್ನು ಚಿತ್ರತಂಡದವರು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಶಿವರಾಜಕುಮಾರ್, ‘ಚಿತ್ರವನ್ನು ಅಪು್ಪಗೆ ಅರ್ಪಿಸುವುದಕ್ಕೆ ಇಡೀ ಚಿತ್ರತಂಡ ತೀರ್ವನಿಸಿದೆ. ಅಪ್ಪು ಅವರ ಎಡಿಟಿಂಗ್ ಸ್ಟುಡಿಯೋದಲ್ಲೇ ಚಿತ್ರದ ಸಂಕಲನ ಕೆಲಸ ನಡೆದಿದ್ದು, ಚಿತ್ರದ ತುಣುಕುಗಳನ್ನು ನೋಡಿ ಅಪ್ಪು ಖುಷಿಪಟ್ಟಿದ್ದರು. ಪ್ರೀ-ರಿಲೀಸ್ ಇವೆಂಟ್ಗೂ ಮುಖ್ಯ ಅತಿಥಿಯಾಗಿ ಬಂದಿದ್ದರು. ನಾನು, ಅಪ್ಪು ಮತ್ತು ಯಶ್ ಆ ದಿನ ಒಟ್ಟಿಗೆ ಹಾಡಿಗೆ ಹೆಜ್ಜೆ ಹಾಕಿದ್ದೆವು.
ಅಷ್ಟೇ ಅಲ್ಲ, ಅವರು ನಿಧನರಾದ ದಿನ ಸಹ, ವಿತರಕರಿಗೆ ಫೋನ್ ಮಾಡಿ, ಚಿತ್ರದ ರಿಪೋರ್ಟ್ ಪಡೆದುಕೊಂಡಿದ್ದರು. ‘ಭಜರಂಗಿ 2’ ಚಿತ್ರಕ್ಕೆ ಅವರೆಷ್ಟು ಹತ್ತಿರವಾಗಿದ್ದರು ಎಂದು ಇದರಿಂದಲೇ ಗೊತ್ತಾಗುತ್ತದೆ. ಈ ಸಿನಿಮಾದಲ್ಲೂ ಒಂದು ವಿಷಯದಲ್ಲಿ ಅಪು್ಪ ಅವರನ್ನು ನೋಡಬಹುದು. ಸಾಕಷ್ಟು ಸನ್ನಿವೇಶಗಳು ಅಪು್ಪಗೆ ರಿಲೇಟ್ ಆಗುವಂತೆ ಬರುತ್ತದೆ’ ಎಂದಿದ್ದಾರೆ. ‘ಭಜರಂಗಿ 2’ ಚಿತ್ರವನ್ನು ಎ. ಹರ್ಷ ನಿರ್ದೇಶಿಸಿದ್ದು, ಜಯಣ್ಣ ಮತ್ತು ಭೋಗೇಂದ್ರ ನಿರ್ವಿುಸಿದ್ದಾರೆ. ಶಿವರಾಜಕುಮಾರ್ ಜತೆಗೆ ಭಾವನಾ ಮೆನನ್, ಶ್ರುತಿ, ‘ಭಜರಂಗಿ’ ಲೋಕಿ ಮುಂತಾದವರು ನಟಿಸಿದ್ದಾರೆ.