ಮತ್ತೆ ಶುರುವಾಯ್ತು 'ಭಜರಂಗಿ 2' ಚಿತ್ರದ ಚಿತ್ರೀಕರಣ ...

Bhajarangi 2 - Final
Published on

'ಭಜರಂಗಿ 2' ಚಿತ್ರದ ಬಾಕಿ ಉಳಿದಿರುವ ದೃಶ್ಯಗಳ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದೆ. ನೆಲಮಂಗಲ ಬಳಿ ಇರುವ ಮೋಹನ್​ ಬಿ ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿರುವ ಸೆಟ್​​ನಲ್ಲಿ ಚಿತ್ರೀಕರಣ ಇದೀಗ ಶುರುವಾಗಿದೆ.

ಈ ಕುರಿತು ಜಯಣ್ಣ ಫಿಲಂಸ್​ ಟ್ವೀಟ್​ ಮಾಡಿದೆ. 'ಮತ್ತೆ ಭರ್ಜರಿಯಾಗಿ ಸಾಗುತ್ತಿದೆ 'ಕರುನಾಡ ಚಕ್ರವರ್ತಿ' ಶಿವಣ್ಣ ಅಭಿನಯದ 'ಭಜರಂಗಿ 2' ಚಿತ್ರದ ಚಿತ್ರೀಕರಣ' ಎಂದು ಬರೆಯುವುದರ ಜತೆಗೆ ಒಂದು ಫೋಟೋ ಸಹ ಶೇರ್​ ಮಾಡಲಾಗಿದೆ. ಈ ಬ್ಲಾಕ್​ ಅಂಡ್​ ವೈಟ್​ ಫೋಟೋದಲ್ಲಿ ಯಾರೋ ಮೇಲಿನಿಂದ ನೇತಾಡುತ್ತಿರುವ ಹಾಗೆ ಕಾಣುತ್ತಿದ್ದು, ಯಾರು? ಯಾಕೆ? ಏನು? ಎಂಬ ಯಾವ ವಿಷಯವನ್ನೂ ಬಹಿರಂಗ ಮಾಡಲಾಗಿಲ್ಲ.

ಅಂದಹಾಗೆ, 'ಭಜರಂಗಿ 2' ಚಿತ್ರದ ಚಿತ್ರೀಕರಣ ಮಾರ್ಚ್​​ನಲ್ಲೇ ಮುಗಿಯಬೇಕಿತ್ತು. ಕೇವಲ ಏಳೆಂಟು ದಿನಗಳ ಮಾತ್ರ ಚಿತ್ರೀಕರಣ ಬಾಕಿ ಇದ್ದು, ಇನ್ನೆಲ್ಲವನ್ನೂ ಮುಗಿಸಲಾಗಿತ್ತು. ಆದರೆ, ಇನ್ನೇನು ಚಿತ್ರತಂಡದವರು ಬಾಕಿ ಇರುವ ಚಿತ್ರೀಕರಣ ಮುಗಿಸಬೇಕು ಎನ್ನುವುಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಯಿತು.

ಈಗ ಲಾಕ್​ಡೌನ್​ ಮುಗಿದು, ಕರೊನಾ ಹಾವಳಿ ಕಡಿಮೆಯಾಗುತ್ತಿದೆ. ಇನ್ನೊಂದು ಕಡೆ ಹಲವು ಚಿತ್ರತಂಡಗಳು ಚಿತ್ರೀಕರಣ ಪ್ರಾರಂಭಿಸಿವೆ. ಈ ಮಧ್ಯೆ, 'ಭಜರಂಗಿ 2' ಚಿತ್ರದ ಚಿತ್ರೀಕರಣ ಸಹ ಪ್ರಾರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕುಂಬಳಕಾಯಿ ಒಡೆಯಲಾಗುತ್ತದೆ.

'ಭಜರಂಗಿ 2' ಚಿತ್ರದಲ್ಲಿ ಶಿವರಾಜಕುಮಾರ್​, ಭಾವನಾ ಮೆನನ್​, ಶ್ರುತಿ, ಶಿವರಾಜ್​ ಕೆ.ಆರ್. ಪೇಟೆ, 'ಭಜರಂಗಿ' ಲೋಕಿ ಮುಂತಾದವರು ಅಭಿನಯಿಸಿದ್ದಾರೆ. ಇನ್ನು ಹರ್ಷ ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿರುವ ಈ ಚಿತ್ರದ ಟೀಸರ್​, ಶಿವರಾಜಕುಮಾರ್​ ಅವರ ಹುಟ್ಟುಹಬ್ಬದಂದು ಕಳೆದ ತಿಂಗಳು ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net