

ಹಿಂದಿ ಕಿರುತೆರೆ ನಟ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಖ್ಯಾತಿಯ ಆಕಾಶ್ ಚೌಧರಿಗೆ ಅದೃಷ್ಟ ಕೈಕೊಟ್ಟಿದೆ ಎಂದೆನಿಸುತ್ತದೆ. ಏಕೆಂದರೆ, ಕಳೆದ ಜುಲೈನಲ್ಲಷ್ಟೇ ಆಕಾಶ್ ಅಪಘಾತಕ್ಕೀಡಾಗಿದ್ದರು. ಮುಂಬೈನ ಲೋನಾವಾಲಾದಲ್ಲಿ ತಮ್ಮ ಸಾಕುನಾಯಿ ಜತೆ ಕಾರಿನಲ್ಲಿ ಹೋಗುವಾಗ, ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಆಕಾಶ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಆದರೆ, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಆಕಾಶ್ ಬಚಾವಾಗಿದ್ದರು.
ಅದರ ಬೆನ್ನಲ್ಲೇ, ಇತ್ತೀಚೆಗಷ್ಟೆ ಕೆಲ ಕಿಡಿಗೇಡಿಗಳು ಅವರ ಜತೆ ಸೆಲ್ಫೀ ಕ್ಲಿಕ್ಕಿಸಿಕೊಂಡು, ಬಳಿಕ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಶುಕ್ರವಾರ (ಸೆ. 15) ಮುಂಬೈನಲ್ಲಿ ಕೆಲ ಅಭಿಮಾನಿಗಳು ಅವರ ಜತೆ ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಆಗ ಅಲ್ಲೇ ಇದ್ದ ಯುವಕನೊಬ್ಬ ಸೆಲ್ಫೀ ಪಡೆದ ಬಳಿಕ, ಆಕಾಶ್ ಮೇಲೆ ನೀರಿನ ಬಾಟಲ್ ಎಸೆಯಲು ಮುಂದಾಗಿದ್ದಾನೆ. ತಕ್ಷಣ ಆಕಾಶ್, ‘ಏನು ಮಾಡುತ್ತಿದ್ದೀಯಾ?’ ಎಂದು ಗದರಿದ್ದಾರೆ. ಜತೆಗೆ ಸ್ಥಳದಲ್ಲಿದ್ದರೆ, ಸಮಸ್ಯೆ ಉಂಟಾಗಬಹುದೆಂದು ಅರಿತು, ಅಲ್ಲಿಂದ ಹೊರನಡೆಯಲು ಯತ್ನಿಸಿದ್ದಾರೆ.
ಆದರೂ, ಬೆನ್ನುಬಿಡದ ಕೆಲವರು ಆಕಾಶ್ ಹಿಂಬಾಲಿಸಿ, ನೀರಿನ ಬಾಟಲ್ ಅವರ ಮೇಲೆಸೆದಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ತಾರೆಯರು ಘಟನೆಯ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-ಏಜೆನ್ಸೀಸ್