'ಬರ್ಕ್ಲಿ' ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಬಿಡುಗಡೆ ...

Berkley - Final
Published on

'ಕರಿಯ 2' ಚಿತ್ರದ ನಂತರ ನಟ ಸಂತೋಷ್​ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಒಂದೆರೆಡು ಚಿತ್ರಗಳಲ್ಲಿ ಅವರ ಹೆಸರು ಕೇಳಿಬಂದಿತ್ತಾದರೂ, ಸಂತೋಷ್​ ಅಭಿನಯದ ಯಾವೊಂದು ಚಿತ್ರ ಸಹ ಎರಡ್ಮೂರು ವರ್ಷಗಳಿಂದ ಬಿಡುಗಡೆಯಾಗಿರಲಿಲ್ಲ.

ಈ ಮಧ್ಯೆ, ಸಂತೋಷ್​ ಅಭಿನಯದ ಹೊಸ ಚಿತ್ರವೊಂದರ ಫಸ್ಟ್​​ ಲುಕ್​ ಮತ್ತು ಟೈಟಲ್​ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಕೇಳಿಬಂದಿತ್ತು. ಅದರಂತೆ, ಇಂದು ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆಯಾಗಿದ್ದು, ಚಿತ್ರಕ್ಕೆ 'ಬರ್ಕಲಿ' ಎಂಬ ಹೆಸರನ್ನು ಇಡಲಾಗಿದೆ.

ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ರಾಜಸ್ಥಾನದ ಜೈಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಕ್ಲೈಮ್ಯಾಕ್ಸ್ ಹಾಗೂ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಕರೊನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ, ಚಿತ್ರೀಕರಣ ಮುಗಿಯಲಿದೆ.

ಈ ಹಿಂದೆ 'ಕರಿಯ', 'ಗಣಪ', 'ಕರಿಯ ೨' ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಸಂತೋಷ್​ ಅವರ ತಂದೆ ಆನೇಕಲ್​ ಬಾಲರಾಜ್​, ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ವಸಿಷ್ಠ ಸಿಂಹ ಅಭಿನಯದ 'ಕಾಲಚಕ್ರ' ಚಿತ್ರವನ್ನು ನಿರ್ದೇಶಿಸಿರುವ ಸುಮಂತ್ ಕ್ರಾಂತಿ ಈ ಚಿತ್ರದ ನಿರ್ದೇಶಕರು. ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಸಂತೋಷ್​ಗೆ ನಾಯಕಿಯಾಗಿ ಸಿಮ್ರಾನ್ ನಾಟೇಕರ್ ನಟಿಸಿದ್ದು, ಮಿಕ್ಕಂತೆ ಚರಣರಾಜ್, ಶ್ರುತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. 'ಬಹದ್ದೂರ್' ಚೇತನ್, ಅಭಿ ಕನಸಿನ ಕವನ‌ ಈ ಚಿತ್ರದ ಹಾಡುಗಳನ್ನು ರಚಿಸಿದರೆ, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net