

ಬೆಂಗಳೂರು: ಅದೊಂದು ಅನುಮಾನ ಎಲ್ಲರಿಗೂ ಇದ್ದೇ ಇತ್ತು. ಬೇರೆಲ್ಲ ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾದರೂ, ವಿಜಯ್ ಅಭಿನಯದ ತಮಿಳು ಚಿತ್ರ ‘ಬೀಸ್ಟ್’ನ ಬಿಡುಗಡೆ ದಿನಾಂಕ ಮಾತ್ರ ಘೋಷಣೆಯಾಗಿರಲಿಲ್ಲ. ಏಪ್ರಿಲ್ 14ಕ್ಕೆ, ‘ಕೆಜಿಎಫ್ 2’ ಚಿತ್ರದ ಜತೆಗೆ ಆ ಚಿತ್ರ ಕ್ಲಾಶ್ ಆಗುತ್ತದೆ ಎಂಬ ಗುಸುಗುಸು ಇತ್ತು. ಆದರೆ, ಚಿತ್ರತಂಡ ಮಾತ್ರ ಅಪ್ಪಿತಪ್ಪಿಯೂ ಈ ಬಗ್ಗೆ ಮಾತನಾಡಿರಲಿಲ್ಲ.
ಈಗ ಚಿತ್ರವವನ್ನು ಏ. 13ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರ ನಿರ್ವಿುಸಿರುವ ಸನ್ ಪಿಕ್ಚರ್ಸ್ ಸಂಸ್ಥೆಯೇ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. ಚಿತ್ರವು ‘ಕೆಜಿಎಫ್ 2’ಗಿಂತ ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗುತ್ತಿದ್ದು, ಈ ಮೂಲಕ ಒಂದು ದೊಡ್ಡ ಕ್ಲಾಶ್ ತಪ್ಪಿದೆ. ಎರಡು ದೊಡ್ಡ ಚಿತ್ರಗಳು ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗುತ್ತಿದ್ದರೂ, ಎರಡೂ ಚಿತ್ರಗಳಿಗೆ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ, ‘ಬೀಸ್ಟ್’ ಬರೀ ತಮಿಳಿನಲ್ಲಿ ಮಾತ್ರ ಬಿಡುಗಡೆಯಾದರೆ, ‘ಕೆಜಿಎಫ್ 2’ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಹಾಗಾಗಿ, ‘ಕೆಜಿಎಫ್ 2’ಗೆ ಬರೀ ತಮಿಳುನಾಡಿನಲ್ಲಿ ಮಾತ್ರ ಸ್ವಲ್ಪ ಸಮಸ್ಯೆ ಎದುರಾಗುವುದು ಬಿಟ್ಟರೆ, ಮಿಕ್ಕಂತೆ ಬೇರೆ ರಾಜ್ಯಗಳಲ್ಲಿ ಅಷ್ಟಾಗಿ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿದೆ.
ಅಮೇರಿಕಾದಲ್ಲಿ ಏ. 13ಕ್ಕೆ: ಹಾಗೆ ನೋಡಿದರೆ, ‘ಕೆಜಿಎಫ್ 2’ ಸಹ ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗುತ್ತಿದೆ. ಅದು ಇಲ್ಲಲ್ಲ, ಅಮೆರಿಕಾದಲ್ಲಿ. ಏ.13ಕ್ಕೆ ಚಿತ್ರವನ್ನು ಅಮೆರಿಕಾದಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದ್ದು, ಅಲ್ಲಿ ಮೊದಲು ಬಿಡುಗಡೆಯಾಗಿ ಆ ನಂತರ ಭಾರತದಲ್ಲಿ ಬಿಡುಗಡೆಯಾಗಿದೆ.
26 ಮಿಲಿಯನ್ ವೀಕ್ಷಣೆ: ಇನ್ನು, ‘ಕೆಜಿಎಫ್ 2’ ಚಿತ್ರದ ‘ತೂಫಾನ್’ ಹಾಡು ಸೋಮವಾರವಷ್ಟೇ ಬಿಡುಗಡೆಯಾಗಿತ್ತು. ಈ ಹಾಡು ಬಿಡುಗಡೆಯಾದ 24 ಗಂಟೆಗಳಲ್ಲಿ 26 ಮಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆಯನ್ನು ನಿರ್ವಿುಸಿದೆ.