ಹೊಸಬರ 'ಬಂಬೂ ಸವಾರಿ'ಗೆ ಸುನಿ, ಕಿಟ್ಟಿ, ವಿನೋದ್​ ಪ್ರಭಾಕರ್​ ಸಾಥ್​

D8H_8969
Published on

ಬೆಂಗಳೂರು: 'ಇಂಗ್ಲೀಷ್​ ಮಂಜ' ಚಿತ್ರವೇ ಇನ್ನು ಮುಗಿದಿಲ್ಲ. ಆಗಲೇ ನಿರ್ದೇಶಕ ಮಹೇಶ್​ ಸದ್ದಿಲ್ಲದೆ ಒಂದು ಹೊಸ ಚಿತ್ರವನ್ನು ಪ್ರಾರಂಭಿಸಿದ್ದಾರೆ. ಈ ಬಾರಿ ಅವರು ತಮ್ಮ ಚಿತ್ರಕ್ಕೆ 'ಬೂ ಸವಾರಿ' ಎಂಬ ಹೆಸರಿಟ್ಟಿದ್ದು, ಇತ್ತೀಚೆಗೆ ಈ ಚಿತ್ರದ ಮುಹೂರ್ತ ಬೆಂಗಳೂರಿನ ಗುಂಡಾಂಜನೇಯ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿದೆ.

ವಿಶೇಷವೆಂದರೆ, ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕರಾದ ಕೆ.ಎಂ.ಚೈತನ್ಯ ಮತ್ತು ಸಿಂಪಲ್ ಸುನಿ ಈ ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಚಿತ್ರದ ಹೆಸರು 'ಜಂಬೂ ಸವಾರಿ' ಅಂತಂದುಕೊಂಡಿದ್ದರಂತೆ ಶ್ರೀನಗರ ಕಿಟ್ಟಿ. ಆದರೆ, ಮುಹೂರ್ತಕ್ಕೆ ಬಂದ ಮೇಲೆ ಅವರಿಗೆ ಹೆಸರು 'ಬಂಬೂ ಸವಾರಿ' ಎಂದು ಗೊತ್ತಾಯಿತು. ಚಿತ್ರದ ಶೀರ್ಷಿಕೆಯೇ ಬಹಳ ಕುತೂಹಲ ಕೆರಳಿಸುವಂತಿದೆ ಎಂದ ಅವರು, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಿಟ್ಟಿ ತರಹ ವಿನೋದ್ ಪ್ರಭಾಕರ್ ಸಹ ಚಿತ್ರದ ಹೆಸರನ್ನು ತಪ್ಪಾಗಿ ತಿಳಿದುಕೊಂಡಿದ್ದರಂತೆ. 'ಪುನೀತ್ ರಾjಕುಮಾರ್' ಆಶೀರ್ವಾದದೊಂದಿಗೆ ಸಿನಿಮಾ ಪ್ರಾರಂಭ ಮಾಡಿದ್ದಾರೆ. ನಾನು ಕೂಡ ಕಿಟ್ಟಪ್ಪನ ತರಹ 'ಜಂಬೂ ಸವಾರಿ' ಅಂದುಕೊಂಡಿದ್ದೆ. 'ನವಗ್ರಹ' ಮಾಡುವಾಗ ಜಂಬೂ ಸವಾರಿ ಬಹಳ ಜನಪ್ರಿಯವಾಗಿತ್ತು. ಇಡೀ ತಂಡಕ್ಕೆ ಒಳ್ಳೆಯದಾಗಲಿ ' ಎಂದು ಶುಭ ಕೋರಿದರು.

'ಬಂಬೂ ಸವಾರಿ' ಚಿತ್ರದಲ್ಲಿ ತಾಂಡವ ರಾಮ, ವರ್ಧನ್, ದೀಪಕ್, ಆದ್ಯ ಪ್ರಿಯಾ, ಅಭಿ ಸಾರಿಕಾ ನಾಯಕ-ನಾಯಕಿಯರಾಗಿ ನಟಿಸುತ್ತಿದ್ದು, ಉಳಿದಂತೆ ಡಾ.ವಿ. ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್, ಬಾಲರಾಜ್ ವಾಡಿ, ಷರೀಫ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಡೇವಿಡ್ ಆರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net