ಹುಡುಗಿಯರಿಗಾಗಿ ಡ್ರಗ್ಸ್​ ಸೇವನೆ ಆರಂಭಿಸಿದ ಬಳಿಕ ಎದುರಾದ ಸಮಸ್ಯೆಗಳನ್ನು ಬಿಚ್ಚಿಟ್ಟ ಸಂಜಯ್​ ದತ್​!

Sanjay Dutt
Published on

ಮುಂಬೈ: ಕೆಜಿಎಫ್​ ಚಾಪ್ಟರ್​ 2 ಸಿನಿಮಾದಲ್ಲಿ ತಮ್ಮ ನಟನೆಯ ಮೂಲಕ ಮೋಡಿ ಮಾಡಿರುವ ನಟ ಸಂಜಯ್​​​ ದತ್ ಚಿತ್ರದ ಯಶಸ್ಸಿನ ಗುಂಗಿನಲ್ಲಿದ್ದಾರೆ. ಬಾಲಿವುಡ್​ನಲ್ಲಿಯು ಕೆಜಿಎಫ್​ ಕಮಾಲ್​ ಮಾಡಿರುವುದರಿಂದ ಅನೇಕ ಮಾಧ್ಯಮಗಳು ಅವರ ಹಿಂದೆ ಬಿದ್ದಿದ್ದು, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸಂಜಯ್​ ದತ್​ ಅವರು ಹಲವು ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಸಂಜಯ್​ ದತ್​ ಅವರು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದ ಸಂಗತಿ ಮತ್ತು ಅವರು ಜೈಲಿಗೆ ಹೋಗಿ ಬಂದ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲದೆ, ಅನಾರೋಗ್ಯದಿಂದ ಬಳಲಿ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಇನ್ನು ಸಂಜಯ್​ ದತ್​ ಕುರಿತ ಬಯೋಪಿಕ್​ ಚಿತ್ರದಲ್ಲಿಯೂ ಅವರ ಅನೇಕ ವೈಯಕ್ತಿಕ ವಿಚಾರಗಳನ್ನು ತೋರಿಸಿದ್ದಾರೆ. ಎಲ್ಲ ಸಂಗತಿಗಳ ಬಗ್ಗೆ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಅವರು ಮುಕ್ತವಾಗಿ ಮಾತನಾಡಿದ್ದಾರೆ

ನಾನು ಆ ಸಮಯದಲ್ಲಿ ಹುಡುಗಿಯರ ಜತೆ ಮಾತನಾಡಲು ಭಯ ಪಡುತ್ತಿದ್ದೆ. ನಾನು ತುಂಬಾ ನಾಚಿಕೆ ಸ್ವಭಾವದವನು. ಹುಡುಗಿಯರ ಜನತೆ ಮಾತನಾಡಲು ಆಗುತ್ತಿರಲಿಲ್ಲ. ಹೀಗಾಗಿ ನಾನು ಡ್ರಗ್ಸ್​ ತೆಗೆದುಕೊಳ್ಳಲು ಆರಂಭಿಸಿದೆ. ಡ್ರಗ್ಸ್ ನನನ್ನು 'ಕೂಲ್' ಆಗಿ ಕಾಣುವಂತೆ ಮಾಡುತ್ತಿತ್ತು. ಅಲ್ಲದೆ, ಸ್ವಲ್ಪ ಧೈರ್ಯವನ್ನು ನೀಡುತ್ತಿತ್ತು. ಹುಡುಗಿಯರೊಂದಿಗೆ ಮಾತನಾಡಲು ಮತ್ತು ಪ್ರಭಾವ ಬೀರಲು ಡ್ರಗ್ಸ್​ ಬಳಸುತ್ತಿದ್ದೆ ಎಂದು ಹೇಳಿದ್ದಾರೆ.

ಆದರೆ, ತದನಂತರದಲ್ಲಿ ಡ್ರಗ್ಸ್​ ನನ್ನ ಜೀವನವನ್ನೇ ಬದಲಾಯಿಸಿತು. ನಾನು ಡ್ರಗ್ಸ್​ಗೆ ವ್ಯಸನಿಯಾದೆ. ಅದರಿಂದ ಹೊರ ಬರಲು ಎಷ್ಟು ಕಷ್ಟ ಎಂದು ನನಗೆ ತಿಳಿದಿತ್ತು. ನಾನು ನನ್ನ ಜೀವನದ ಹತ್ತು ವರ್ಷಗಳನ್ನು ಲಿವಿಂಗ್ ರೂಮ್ ಅಥವಾ ಶೌಚಗೃಹದಲ್ಲಿ ಕಳೆದಿದ್ದೇನೆ. ಅಲ್ಲದೆ, ಶೂಟಿಂಗ್​ ಮೇಲಿನ ಆಸಕ್ತಿಯನ್ನೂ ಕಳೆದುಕೊಂಡಿದ್ದೆ. ಯಾವಾಗಲೂ ಒಂಟಿಯಾಗಿರುತ್ತಿದೆ. ಡ್ರಗ್ಸ್‌ನ ಪರಿಣಾಮದಿಂದ ಚೇತರಿಸಿಕೊಳ್ಳಲು ನಾನು ದೀರ್ಘಕಾಲ ಪುನರ್ವಸತಿ ಕೇಂದ್ರದಲ್ಲಿ ಇರಬೇಕಾಯಿತು ಎಂದು ಹಿಂದಿನ ಕಹಿ ಘಟನೆಗಳನ್ನು ಮೆಲುಕು ಹಾಕಿದರು.

ನಾನು ಪುನರ್ವಸತಿ ಕೇಂದ್ರದ ಮರಳಿ ಬಂದಾಗ ಎಲ್ಲರು ನನ್ನನ್ನು ಡ್ರಗ್ಸ್​ ವ್ಯಸನಿ ಎಂದು ಕರೆಯುತ್ತಿದ್ದರು. ಆದರೆ, ನಾನು ಧೃತಿಗೆಡದೆ ನನ್ನ ದೇಹವನ್ನು ದಂಡಿಸಿ, ನಟನೆಯ ಕಡೆ ಒತ್ತು ನೀಡಿದೆ. ಪುನಃ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದೆ ಎಂದು ತಮ್ಮ ಜೀವನದ ಹಾದಿಯನ್ನು ಸಂಜಯ್​ ದತ್​ ನೆನಪು ಮಾಡಿಕೊಂಡರು.

ಅಂದಹಾಗೆ ಕೆಜಿಎಫ್​ ಚಿತ್ರದಲ್ಲಿ ಸಂಜಯ್​ ದತ್​ ಅವರು ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಖಡಕ್​ ಅಭಿನಯವನ್ನು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net