

ಬೆಂಗಳೂರು: ಈ ಲೋಕೇಂದ್ರ ಸೂರ್ಯ ಒಂದಲ್ಲ ಒಂದು ಕೆಲಸದಲ್ಲಿ ಬಿಜಿಯಾಗಿರುತ್ತಾರೆ. 'ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು' ಎಂಬ ಚಿತ್ರದಲ್ಲಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದರು. ಆ ನಂತರ 'ಚೆಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟʼಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟಿಸಿದ್ದರು. ಆ ನಂತರ ಥ್ರಿಲ್ಲರ್ ಮಂಜು ಅವರ 'ಡೆಡ್ಲಿ ಕಿಲ್ಲರ್' ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದ್ದರು. 'ಕುಗ್ರಾಮ' ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿದರೆ, 'ಬ್ರಹ್ಮಕಮಲ' ಚಿತ್ರಕ್ಕೆ ಲೋಕೇಂದ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
ಈಗ ಅವರು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರ ಮಾಡುತ್ತಿದ್ದಾರೆ. ನಿರ್ದೇಶನದ ಜತೆಗೆ ಅವರೇ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. 'ಅಥಿ ಐ ಲವ್ ಯೂ' ಹೆಸರಿನ ಈ ಚಿತ್ರ ರಾಜಾಜಿನಗರದ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಪ್ರಾರಂಭವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ ಮ ಹರೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ.
ಗಂಡ-ಹೆಂಡತಿ ನಡುವೆ ಒಂದು ದಿನದಲ್ಲಿ ನಡೆಯುವ ಕಥೆಯಂತೆ ಇದು. ಎರಡು ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಕಥೆ ರೂಪಿಸಲಾಗಿದೆ. 'ಗಂಡ ಕೆಲಸಕ್ಕೆಂದು ಹೊರ ಹೋದ ನಂತರ ನಡೆಯುವ ಒಂದಷ್ಟು ಘಟನೆಗಳನ್ನು ರೋಚಕವಾಗಿ ತೋರಸಲಾಗುತ್ತದೆ' ಎನ್ನುತ್ತಾರೆ ಲೋಕೇಂದ್ರ ಸೂರ್ಯ.
ಇನ್ನು, ಅವರಿಗೆ ನಾಯಕಿಯಾಗಿ ಓಂಪ್ರಕಾಶ್ ರಾವ್ ಮಗಳು ಶ್ರಾವ್ಯ ರಾವ್ ಕಾಣಿಸಿಕೊಂಡಿದ್ದಾರೆ. ಈ ಕಥೆ ತನಗೆ ಬಹಳ ಇಷ್ಟವಾಯ್ತು ಎನ್ನುವ ಶ್ರಾವ್ಯ, 'ಇತ್ತೀಚೆಗೆ ಹಲವಾರು ಸಿನಿಮಾಗಳ ಕತೆ ಕೇಳಿದ್ದೇನೆ. ಆದರೆ 'ಅಥಿ' ಚಿತ್ರದ ಕತೆ ನನಗೆ ಬಹಳ ಇಷ್ಟವಾಯ್ತು. ಈ ಪಾತ್ರ ಮತ್ತು ಸಿನಿಮಾ ಎರಡೂ ಕನ್ನಡದ ಮಟ್ಟಿಗೆ ತೀರಾ ಹೊಸದಾಗಿದೆ. ಇಡೀ ಚಿತ್ರ ನನ್ನ ಪಾತ್ರದ ಮೇಲೇ ಹೆಚ್ಚು ಕ್ಯಾರಿ ಆಗುತ್ತಿರುವುದು ನನಗೆ ಖುಷಿ ಕೊಟ್ಟಿದೆ' ಎನ್ನುತ್ತಾರೆ.
'ಅಥಿ ಐ ಲವ್ ಯೂ' ಚಿತ್ರವನ್ನು ಸೆವೆನ್ ರಾಜ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಿಸುತ್ತಿದ್ದಾರೆ. ಯುಡಿವಿ ವೆಂಕಿ ಸಂಕಲನ, ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ.