ಕಡಲ ತೀರದಲ್ಲಿ ರೋಚಕ ಸಾಹಸ; ಸೈಕಲಾಜಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ

Bharagava
Published on

ಬೆಂಗಳೂರು: ಪನ್ನಗ ಸೋಮಶೇಖರ್ ನಿರ್ದೇಶನದ ಸೈಕಲಾಜಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ ‘ಕಡಲ ತೀರದ ಭಾರ್ಗವ’. ಭರತ್ ಗೌಡ, ಪಟೇಲ್ ವರುಣ್ ರಾಜು, ಶೃತಿ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

ಸಮುದ್ರದಲ್ಲಿ ಮುಳುಗುವ ಸನ್ನಿವೇಶ, ಬೆಂಕಿಯ ನಡುವೆ, ಮಳೆಯಲ್ಲಿ, ಸಮುದ್ರದ ದಡದಲ್ಲಿ, ಸ್ಮಶಾನದಲ್ಲಿ... ಹೀಗೆ ಚಿತ್ರದ ಶೂಟಿಂಗ್ ರೋಚಕ ವಾಗಿದೆ. ಅದರ ಬಗ್ಗೆ ನಿರ್ದೇಶಕ ಪನ್ನಗ, ‘ನಾಯಕಿ ಎತ್ತರದಿಂದ ಕೆಳಗೆ ಬೀಳುವಾಗ ತಲೆಗೆ ಬಂಡೆ ಒಡೆದು, ನೀರಿನಲ್ಲಿ ಮುಳುಗುವ ಸೀನ್ ಗ್ರೀನ್ ಮ್ಯಾಟ್​ನಲ್ಲಿ ಚಿತ್ರೀಕರಿಸಿದೆವು. ನಾಯಕ-ನಾಯಕಿ ಇಬ್ಬರಿಗೂ ಹಗ್ಗ ಕಟ್ಟಿ, ನಾಯಕ ತೇಲುತ್ತಿರುವಂತೆ, ನಾಯಕಿ ಮುಳುಗುತ್ತಿರುವಂತೆ ಫೀಲ್ ಮಾಡುವಂತೆ ಚಿತ್ರೀಕರಿಸುವುದು ಸವಾಲಿನಿಂದ ಕೂಡಿತ್ತು. ಸಾಹಸ ನಿರ್ದೇಶಕರ ಸಹಾಯದೊಂದಿಗೆ ಶೂಟಿಂಗ್ ಮಾಡಿದೆವು’ ಎಂದು ಹೇಳಿಕೊಳ್ಳುತ್ತಾರೆ.

ಜತೆಗೆ ಮೂರು ನಿಮಿಷಗಳ ಬೆಂಕಿಯ ನಡುವೆ ನಡೆಯುವ ಸೀನ್ ಕೂಡ ಇದೆಯಂತೆ. ‘ಗೋಡೌನ್ ಒಂದರಲ್ಲಿ ಬೆಂಕಿಯ ನಡುವೆ ಚಿತ್ರೀಕರಣ ಮಾಡುವಾಗ, ಪ್ರತಿ ಶಾಟ್​ಗೆ ಮುನ್ನ ಬೆಂಕಿ ಹಚ್ಚುತ್ತಿದ್ದೆವು, ಶಾಟ್ ಮುಗಿದ ತಕ್ಷಣ ಬೆಂಕಿ ಆರಿಸಬೇಕಿತ್ತು. ಅಷ್ಟರಲ್ಲಿ ಎಲ್ಲೆಡೆ ಹೊಗೆ ಆವರಿಸಿಕೊಂಡುಬಿಡುತ್ತಿತ್ತು. ಅದೇ ರೀತಿ ಬೆಂಕಿ ಮಳೆ ಸುರಿಯುವಂತೆಯೂ ಚಿತ್ರೀಕರಿಸಿದೆವು. ನೋಡಲು ಸರಳ ವಾಗಿ ಕಂಡರೂ, ಶೂಟಿಂಗ್ ಸಮಯದಲ್ಲಿ ಸವಾಲಿನಿಂದ ಕೂಡಿತ್ತು’ ಎಂದು ಅನುಭವ ಹಂಚಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net