

ಬೆಂಗಳೂರು: ಉಪೇಂದ್ರ-ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ 'ಕಬ್ಜ' ಬಿಡುಗಡೆಗೆ ಇನ್ನೊಂದು ತಿಂಗಳಷ್ಟೇ ಉಳಿದಿದೆ. ಚಿತ್ರತಂಡ ಸಹ ಪ್ರಚಾರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ. ಈಗ ಶಿವರಾತ್ರಿ ಪ್ರಯುಕ್ತ ಇನ್ನೂ ಒಂದು ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ.
'ಕಬ್ಜ' ಚಿತ್ರದ ಹಾಡುಗಳನ್ನು ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡ ನಿರ್ದೇಶಕ ಆರ್. ಚಂದ್ರು, 'ಹೋದ ಕಡೆ ಚಿತ್ರದ ಕುರಿತು ಕೇಳಿಬರುತ್ತಿರುವ ಪ್ರಶಂಸನೀಯ ಮಾತುಗಳಿಗೆ ಮನ ತುಂಬಿ ಬಂದಿದೆ. ನನ್ನ ತಂಡಕ್ಕೆ ಹಾಗೂ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ' ಎಂದು ಹೇಳಿದರು.
ಈ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎನ್ನುವ ಶ್ರೇಯಾ, 'ಶಿವನನ್ನು ಆರಾಧಿಸುವ ಈ ಹಾಡು ಬಹಳ ಮಧುರವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ' ಎಂದು ಮಾಹಿತಿ ನೀಡಿದರು.
ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ನಡಿ ನಿರ್ಮಾಣವಾಗಿರುವ ಈ ಚಿತ್ರದ ಇನ್ನೊಂದು ಹಾಡು ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಯಾಗಲಿದೆ. ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರಕ್ಕೆ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.