ನನ್ನ ಮದುವೆ ವೇಳೆ ಆ ನಟ ಗಳಗಳನೆ ಅತ್ತಿದ್ದರು: ಸ್ವಾರಸ್ಯಕರ ಘಟನೆ ಬಿಚ್ಚಿಟ್ಟ ನಟಿ ಖುಷ್ಬೂ

Actress Kushboo Sundar
ನಟಿ ಕಂ ರಾಜಕಾರಣಿ ಖುಷ್ಬೂ ಸುಂದರ್​
Published on

ಚೆನ್ನೈ: ಇಂದಿಗೂ ಸಾವಿರಾರು ಅಭಿಮಾನಿಗಳ ಮನದಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ಎವರ್​ಗ್ರೀನ್​ ನಟಿಯರಲ್ಲಿ ಒಬ್ಬರೆಂದರೆ ಅದು ಖುಷ್ಬೂ ಮಾತ್ರ. ಅವರ ಮೇಲಿನ ಅಭಿಮಾನ ಎಷ್ಟರಮಟ್ಟಿಗೆ ಇದೆ ಅಂದ್ರೆ ಅವರ ಹೆಸರಲ್ಲಿ ಅಭಿಮಾನಿಗಳು ದೇವಸ್ಥಾನವನ್ನೇ ನಿರ್ಮಿಸಿದ್ದಾರೆ. ಖುಷ್ಬೂ ಅವರು 90ರ ದಶಕದ ಮುಂಚೂಣಿ ನಟಿಯರಲ್ಲಿ ಒಬ್ಬರು. ಕನ್ನಡಿಗರಿಗಂತೂ ಖುಷ್ಬೂ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲ.

ಖುಷ್ಬೂ ಅವರು ಸದ್ಯ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಬಿಜೆಪಿ ನಾಯಕಿಯಾಗಿರುವ ಖುಷ್ಬೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ ಹೌದು. ಬಣ್ಣದ ಲೋಕವನ್ನು ಸಹ ಖುಷ್ಬೂ ಮರೆತಿಲ್ಲ. ಸಮಯ ಸಿಕ್ಕಾಗ ಸಿನಿಮಾಗಳಲ್ಲಿಯೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಾರೆ. ರಜಿನಿಕಾಂತ್​ ಅಭಿನಯದ ಅಣ್ಣಾತೆ ಚಿತ್ರದಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಅರಮನೈ 4 ಸಿನಿಮಾದಲ್ಲಿ ನಟಿಸಿದರು.

ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಖುಷ್ಬೂ ಅವರು 2000ನೇ ಇಸವಿಯಲ್ಲಿ ನಿರ್ದೇಶಕ ಸುಂದರ್ ಸಿ ಅವರನ್ನು ಪ್ರೀತಿಸಿ ಮದುವೆಯಾದರು. ದಂಪತಿಗೆ ಆವಂತಿಕಾ ಮತ್ತು ಅನಂತಿಕಾ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಂದರ್ ಸಿ ಅವರು ಮಾತ್ರಮಾಮನ್ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಖುಷ್ಬು ನಾಯಕಿ. ಈ ಸಿನಿಮಾದ ಶೂಟಿಂಗ್ ವೇಳೆ ಸುಂದರ್ ಖುಷ್ಬುಗೆ ಪ್ರಪೋಸ್ ಮಾಡಿದ್ದರು.

ಆ ನಂತರ ಇಬ್ಬರೂ ಪ್ರೀತಿಸಿ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದರು. ಇತ್ತೀಚೆಗೆ ಜನಪ್ರಿಯ ಯೂಟ್ಯೂಬ್ ಚಾನೆಲ್ ಒಂದಕ್ಕೆ ಖುಷ್ಬು ಸಂದರ್ಶನ ನೀಡಿದ್ದಾರೆ. ಈ ವೇಳೆ ತನ್ನ ಮದುವೆಯಲ್ಲಿ ನಡೆದ ಸ್ವಾರಸ್ಯಕರ ಸಂಗತಿಯೊಂದರ ಬಗ್ಗೆ ಮಾತನಾಡಿದ್ದಾರೆ.

ಸುಂದರ್ ಸಿ ಅವರು ಮೊದಲು ನಟ ಕಾರ್ತಿಕ್​ ಅವರಿಗೆ ತನ್ನನ್ನು ಮದುವೆಯಾಗುವುದಾಗಿ ಹೇಳಿದ್ದರು. ಈ ವೇಳೆ ಕಾರ್ತಿಕ್​ ಅವರು ನನ್ನನ್ನು ಕರೆದು ಸಂತೋಷದಿಂದ ಕಣ್ಣೀರು ಹಾಕಿದರು. ಅವರು ನಮ್ಮ ಮದುವೆಗೆ ಬಂದಿದ್ದರು. ಈ ವೇಳೆಯೂ ನಟ ಕಾರ್ತಿಕ್​ ಗಳಗಳನೆ ಅತ್ತಿದ್ದರು. ಈ ವೇಳೆ ನಾನು ಮತ್ತು ಸುಂದರ್ ಸಿ ಕಾರ್ತಿಕ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡೆವು. ನಾನು ಕೂಡ ಆ ಸಂದರ್ಭದಲ್ಲಿ ಖುಷಿಯಿಂದ ಕಣ್ಣೀರು ಹಾಕಿದ್ದೆ ಎಂದು ಖುಷ್ಬೂ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net