ನನ್ನ ಅಹಂಕಾರ… ಪ್ರಧಾನಿ ಮೋದಿ ಮುಂದೆ ತಪ್ಪೊಪ್ಪಿಕೊಂಡ ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ!

Virat Kohli
Published on

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯವಾದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಅವರ ಕಳಪೆ ಫಾರ್ಮ್ ಕ್ರೀಡಾಭಿಮಾನಿಗಳನ್ನು ಚಿಂತೆಗೆ ದೂಡಿತ್ತು. ಟೂರ್ನಿಯ ಆರಂಭದಿಂದ ಸೆಮಿಫೈನಲ್​ವರೆಗೂ ಕೊಹ್ಲಿ ಬ್ಯಾಟಿಂಗ್​ನಲ್ಲಿ ದಯನೀಯವಾಗಿ ವಿಫಲರಾದರು. ಆದರೆ, ಫೈನಲ್​ನಲ್ಲಿ ಮತ್ತೆ ಫಾರ್ಮ್​ಗೆ ಮರಳುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಲ್ಲದೆ, ಟ್ರೋಫಿ ಗೆಲುವಿನಲ್ಲಿ ಮುಖ್ಯ ಕಾರಣರಾದರು.​

ಫೈನಲ್‌ ಪಂದ್ಯಕ್ಕೂ ಮುನ್ನ ಕೊಹ್ಲಿ ಕೇವಲ 75 ರನ್ ಗಳಿಸಲಷ್ಟೇ ಶಕ್ತರಾದರು. ತನ್ನ ಕಳಪೆ ಪ್ರದರ್ಶನವನ್ನು ನೆನೆದು ಸೆಮಿಫೈನಲ್​ ಪಂದ್ಯದ ಸಮಯದಲ್ಲಿ ಕೊಹ್ಲಿ ತುಂಬಾ ಭಾವುಕರಾರದು. ಈ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗಿನ ಇತ್ತೀಚಿನ ಭೇಟಿಯ ವೇಳೆ ಕೊಹ್ಲಿ ಮನ ಬಿಚ್ಚಿ ಮಾತನಾಡಿದರು.

ಒಂದು ಹಂತದಲ್ಲಿ, ನಾನು ನನ್ನ ಪುಸ್ತಕದಲ್ಲಿ ಎಲ್ಲ ತಂತ್ರಗಳನ್ನು ಪ್ರಯತ್ನಿಸಿದೆ. ಆದರೆ, ರನ್ ಗಳಿಸಲು ನಾನು ವಿಫಲನಾದೆ. ನಂತರ ನಾನು ಆಕ್ರಮಣಕಾರಿ ಮನೋಭಾವವನ್ನು ಬೆಳೆಸಿಕೊಂಡೆ ಮತ್ತು ಸುಲಭವಾಗಿ ರನ್ ಗಳಿಸಬಹುದೆಂದು ಭಾವಿಸಿದೆ. ಆದರೆ ಅದು ಕೂಡ ವಿಫಲವಾಯಿತು. ಕೆಲವು ಹಂತದಲ್ಲಿ, ನಾವು ದುರಹಂಕಾರ ಮತ್ತು ಗರ್ವವನ್ನು ಬಿಡಬೇಕು. ನನ್ನ ಬ್ಯಾಟಿಂಗ್​ ನನ್ನ ಅಹಕಾಂರನ್ನು ಸರ್ವನಾಶ ಮಾಡಿತು. ಇದಾದ ಬಳಿಕ ನಾನು ತಂಡದ ಬಗ್ಗೆ ಹೆಚ್ಚು ಯೋಚಿಸಲು ಪ್ರಾರಂಭಿಸಿದೆ. ಈ ಒಂದು ಕ್ಷಣ ನನಗೆ ಒಂದು ದೊಡ್ಡ ಪಾಠವಾಗಿತ್ತು ಎಂದು ಕೊಹ್ಲಿ, ಪ್ರಧಾನಿ ಮೋದಿ ಬಳಿ ತಪ್ಪೊಪ್ಪಿಕೊಂಡರು.

ಫೈನಲ್‌ ಪಂದ್ಯದ ವೇಳೆ ನನಗೆ ಆತ್ಮವಿಶ್ವಾಸ ಇರಲಿಲ್ಲ. ಈ ಸಂದರ್ಭದಲ್ಲಿ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮ ನನಗೆ ಸಹಾಯ ಮಾಡಿದರು. ಉತ್ತಮ ಪ್ರದರ್ಶನ ನೀಡಲು ನನಗೆ ಬೆಂಬಲ ನೀಡಿದರು. ಅಗತ್ಯವಿದ್ದಾಗ ರನ್ ಗಳಿಸುವಲ್ಲಿ ನಾನು ಎಡವಿದ್ದನ್ನು ಕೋಚ್‌ ಮುಂದೆ ಒಪ್ಪಿಕೊಂಡೆ. ನಾನು ವೈಫಲ್ಯದಿಂದ ಆಚೆ ಬರಲು ಅವರು ನೀಡಿದ ಬೆಂಬಲವೇ ಕಾರಣ ಎಂದು ಕೊಹ್ಲಿ ಹೇಳಿದರು.

ಫೈನಲ್‌ನಲ್ಲಿ ನಾವು ಏನನ್ನು ಅನುಭವಿಸಿದ್ದೇವೆ ಎಂಬುದನ್ನು ವಿವರಿಸಲು ಅಸಾಧ್ಯ. ಹಾರ್ದಿಕ್ ನಮಗೆ ಮರಣಶಯ್ಯೆಯಿಂದ ಪುನರುಜ್ಜೀವನಗೊಳಿಸುವ ನಿರ್ಣಾಯಕ ವಿಕೆಟ್ ಪಡೆದರು. ಕಠಿಣ ಸಮಯದ ನಂತರ ಇಷ್ಟು ದೊಡ್ಡ ಆಟದಲ್ಲಿ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಿದ್ದಕ್ಕೆ ನನಗೆ ಸಂತೋಷವಾಗಿದೆ. ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಅಂದಹಾಗೆ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆಯೋಜನೆ ಮಾಡಿದ್ದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್​ 29ರಂದು ವೆಸ್ಟ್​ಇಂಡೀಸ್​ ಬಾರ್ಬಡೋಸ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಭಾರತ 17 ವರ್ಷಗಳ ಬಳಿಕ ಟಿ 20 ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿಯಿತು. ವಿಶ್ವಕಪ್​ ಗೆದ್ದ ಬಳಿಕ ಟೀಮ್​ ಇಂಡಿಯಾ ಟ್ರೋಫಿಯೊಂದಿಗೆ ಜುಲೈ 4ರಂದು ತವರಿಗೆ ಮರಳಿತು. ಬಳಿಕ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿತು. ವಿಜೇತರನ್ನು ಅಭಿನಂದಿಸುತ್ತಾ, ವಿಶ್ವಕಪ್ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂಕ್ಷಿಪ್ತವಾಗಿ ಸಂವಾದ ನಡೆಸಿದರು. ಈ ವೇಳೆ ವಿರಾಟ್ ತಮ್ಮ ಮನಸ್ಸಿನ ನೋವನ್ನು ಪ್ರಧಾನಿ ಮುಂದೆ ತೆರೆದಿಟ್ಟರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net