ಹೀಗೇ ಮುಂದುವರೆದರೆ ಚಿತ್ರ ಮಾಡೋದೇ ಕಷ್ಟ ಆಗುತ್ತೆ … ಆಶಾ ಪರೇಖ್​ ಬೇಸರ

Pathaan - Asha Parekh
Published on

ಮುಂಬೈ: ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರದ 'ಬೇಷರಮ್​ ರಂಗ್​' ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ 'ಬಾಯ್ಕಾಟ್ ಪಠಾಣ್' ಎಂಬ ಅಭಿಯಾನವೂ ಶುರುವಾಗಿತ್ತು. ಇದರ ವಿರುದ್ಧ ಪ್ರಕಾಶ್​ ರೈ, ರಮ್ಯಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಬೇಸರ ವ್ಯಕ್ತಪಡಿಸಿದ್ದರು. ಈಗ ಹಿರಿಯ ನಟಿ ಮತ್ತು ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ವಿಜೇತ ನಟಿ ಆಶಾ ಪರೇಖ್​ ಸಹ ಬೇಸರ ವ್ಯಕ್ತಪಡಿಸಿದ್ದಾರೆ

ಇತ್ತೀಚೆಗೆ ಮುಂಬೈನಲ್ಲಿ ಈ ಕುರಿತು ಮಾತನಾಡಿರುವ ಅವರು, 'ಏನೇ ಆದರೂ ಅದೊಂದು ಚಿತ್ರ ಅಷ್ಟೇ. ಅದರ ಉದ್ದೇಶ ಮನರಂಜನೆ ಅಷ್ಟೇ. ಒಬ್ಬ ನಟಿ ಕೇಸರಿ ಬಣ್ಣದ ಬಿಕಿನಿ ತೊಟ್ಟರು ಎಂಬ ಕಾರಣಕ್ಕೆ ಬ್ಯಾನ್​ ಮಾಡುವುದಕ್ಕೆ ಆಗುತ್ತದಾ? ಅದು ಸರಿಯಲ್ಲ. ಮೊದಲೇ ಚಿತ್ರಗಳು ಒಳ್ಳೆಯ ಪ್ರದರ್ಶನ ಕಾಣದೆ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರದೆ ಚಿತ್ರರಂಗ ಕ್ರಮೇಣ ಸಾಯುತ್ತಿದೆ. ಹೀಗಿರುವಾಗ ಬಾಯ್ಕಾಟ್​ ಮತ್ತು ಬ್ಯಾನ್​ ಎಂಬ ಪದಗಳೆಲ್ಲ ಬೇಕಾ? ಸಿನಿಮಾಗಳು ಹೀಗೇ ಸೋಲುತ್ತಿದ್ದರೆ, ಮುಂದೆ ಸಿನಿಮಾಗಳನ್ನು ಮಾಡುವುದು ಹೇಗೆ? ಇದೇ ಮುಂದುವರೆದರೆ ಚಿತ್ರರಂಗ ಅಂತ್ಯವಾಗುತ್ತದೆ' ಎಂದು ಹೇಳಿದ್ದಾರೆ.

ಈ ಕುರಿತು ಇನ್ನಷ್ಟು ಮಾತನಾಡಿರುವ ಅವರು, 'ವಿಚಿತ್ರ ಏನೆಂದರೆ, ಸಮಸ್ಯೆ ಇರುವುದು ಬಿಕಿನಿ ವಿರುದ್ಧವಲ್ಲ, ಬಣ್ಣದ ಬಗ್ಗೆ. ಕ್ರಮೇಣ ನಮ್ಮ ತಲೆ ಕೆಡುತ್ತಿದೆ ಎಂದನಿಸುತ್ತಿದೆ. ನಾವು ಸಣ್ಣ ಮನಸ್ಸಿನವರಾಗುತ್ತಿದ್ದೇವೆ. ಇದು ಬಹಳ ತಪ್ಪು' ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ್ದ 'ಪಠಾಣ್​' ಚಿತ್ರದ ನಾಯಕ ಶಾರೂಖ್​ ಖಾನ್​, 'ಈ ಕಾಲಘಟ್ಟದ ಬಹಳಷ್ಟು ನಂಬಿಕೆಗಳು ಸಾಮಾಜಿಕ ಮಾಧ್ಯಮದಿಂದ ರೂಪುಗೊಂಡಿವೆ. ಸಾಮಾಜಿಕ ಮಾಧ್ಯಮಗಳು, ಸಿನಿಮಾದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಅದಕ್ಕೆ ವ್ಯತಿರಿಕ್ತವಾಗಿ, ಚಲನಚಿತ್ರಕ್ಕೆ ಇನ್ನೂ ಗುರುತರ ಜವಾಬ್ದಾರಿ ಇದೆ ಮತ್ತು ಈಗಿನ ಕಾಲಘಟ್ಟದಲ್ಲಿ ಇನ್ನೂ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆ ನನ್ನದು. ಸೋಷಿಯಲ್​ ಮೀಡಿಯಾದಲ್ಲಿ ನಾವು ಮನುಷ್ಯನ ಸಂಕುಚಿತ ಮನೋಭಾವವನ್ನು ನೋಡಬಹುದು. ಈ ನೆಗೆಟಿವಿಟಿಯು ಸಾಮಾಜಿಕ ಮಾಧ್ಯಮ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಅದರ ವಾಣಿಜ್ಯ ಮೌಲ್ಯವನ್ನು ಹೆಚ್ಚಿಸುತ್ತದೆ. ಇದು ಸಮೂಹವನ್ನು ವಿಭಜಿಸುವುದರ ಜತೆಗೆ ಇನ್ನಷ್ಟು ವಿನಾಶಕಾರಿಯಾಗಿ ಮಾಡುತ್ತದೆ' ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net