

ಮುಂಬೈ: ಯಾಕೋ ಬಹುಭಾಷಾ ನಟಿ ಪೂಜಾ ಹೆಗ್ಡೆ ಅದೃಷ್ಟವೇ ಸರಿ ಇಲ್ಲ ಎಂದನಿಸುತ್ತದೆ. ಈ ವರ್ಷ ಬಿಡುಗಡೆಯಾದ ಆಕೆಯ ಚಿತ್ರಗಳೆಲ್ಲವೂ ಮಕಾಡೆ ಮಲಗಿದ್ದವು. ಈಗ ಆ ಸಾಲಿಗೆ 'ಸರ್ಕಸ್' ಸಹ ಸೇರಿದೆ.
ಈ ವರ್ಷ ಬಿಡುಗಡೆಯಾದ ಪೂಜಾ ಅಭಿನಯದ ಮೊದಲ ಚಿತ್ರವೆಂದರೆ ಅದು 'ರಾಧೇ ಶ್ಯಾಮ್'. ಈ ಪ್ಯಾನ್ ಇಂಡಿಯಾ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸೋಲನುಭವಿಸಿತ್ತು. ಇದು ಟಾಲಿವುಡ್ ಕಥೆಯಾದರೆ, ತಮಿಳಿನ 'ಬೀಸ್ಟ್' ಚಿತ್ರವು ಇದಕ್ಕಿಂತ ವಿಭಿನ್ನವಾಗೇನೂ ಇರಲಿಲ್ಲ. ವಿಜಯ್ ಜತೆಗೆ ಪೂಜಾ ನಟಿಸಿದ ಮೊದಲ ಚಿತ್ರ ಸೋತಿತು. ಆ ನಂತರ ಪೂಜಾ ಅಭಿನಯದ ಇನ್ನೊಂದು ತೆಲುಗು ಚಿತ್ರ 'ಆಚಾರ್ಯ' ಚಿತ್ರ ಸಹ ಫ್ಲಾಪ್ ಪಟ್ಟಿ ಸೇರಿತು.
ಟಾಲಿವುಡ್ ಮತ್ತು ಕಾಲಿವುಡ್ನಲ್ಲಿ ಸೋತಿದ್ದ ಪೂಜಾ, ಬಾಲಿವುಡ್ನಲ್ಲಾದರೂ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಈಗ ಅದು ಸಹ ಸುಳ್ಳಾಗಿದೆ. ಶುಕ್ರವಾರ ಬಿಡುಗಡೆಯಾದ ರೋಹಿತ್ ಶೆಟ್ಟಿ ನಿರ್ದೇಶನದ ಮತ್ತು ರಣವೀರ್ ಸಿಂಗ್ ಅಭಿನಯದ 'ಸರ್ಕಸ್' ಚಿತ್ರವು ಮೊದಲ ದಿನವೇ ಫ್ಲಾಪ್ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಕೇವಲ ಏಳು ಕೋಟಿ ಮಾತ್ರ ಸಂಪಾದಿಸಿದೆ. ಇಂದು ಕಲೆಕ್ಷನ್ ಸಾಕಷ್ಟು ಬಿದ್ದಿದ್ದು, ಚಿತ್ರ ಮೇಲೇಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಲ್ಲಿಗೆ ಪೂಜಾ ಅಭಿನಯದ ಈ ವರ್ಷದ ನಾಲ್ಕನೆಯ ಚಿತ್ರ ಸಹ ಸೋತಂತಾಗಿದೆ.
ಪೂಜಾಗೆ ಇದು ಬಾಲಿವುಡ್ನಲ್ಲಿ ಎರಡನೆಯ ಚಿತ್ರವಾಗಿತ್ತು. ಇದಕ್ಕೂ ಮೊದಲು ಅವರು 'ಮೊಹೆಂಜೊ ದಾರೋ' ಎಂಬ ಚಿತ್ರದಲ್ಲಿ ನಟಿಸಿದ್ದರು. ಹೃತಿಕ್ ರೋಶನ್ ಅಭಿನಯದ ಈ ಚಿತ್ರ ಸೋತಿದ್ದರಿಂದ, ಪೂಜಾಗೆ ಕೆಲವು ವರ್ಷಗಳ ಕಾಲ ಬಾಲಿವುಡ್ನಲ್ಲಿ ಅವಕಾಶವೇ ಸಿಕ್ಕಿರಲಿಲ್ಲ. ಈಗ ಅಪರೂಪಕ್ಕೆ ಒಂದು ಅವಕಾಶ ಸಿಕ್ಕಿದ್ದು, ಅದು ಸಹ ಆಕೆಗೆ ವರ್ಕೌಟ್ ಆಗಿಲ್ಲ ಎಂಬುದು ಬೇಸರದ ವಿಷಯ.