

ಬೆಂಗಳೂರು: ‘ದುಬಾರಿ’ ಬದಲು ಇನ್ನೇನು? ನಂದಕಿಶೋರ್ ಬದಲು ಇನ್ಯಾರು?- ಈ ಎರಡು ಪ್ರಶ್ನೆಗಳು ಧ್ರುವ ಸರ್ಜಾ ಅಭಿಮಾನಿಗಳನ್ನು ಕಳೆದ ಎರಡು ತಿಂಗಳಿಂದ ಕೊರೆಯುತ್ತಲೇ ಇತ್ತು. ಈಗ ಆ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ‘ದುಬಾರಿ’ ಬದಲು ಧ್ರುವ ಸರ್ಜಾ ಇನ್ನೊಂದು ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಈ ಚಿತ್ರವನ್ನು ಎ.ಪಿ. ಅರ್ಜುನ್ ನಿರ್ದೇಶಿಸುತ್ತಿದ್ದಾರೆ ಮತ್ತು ಇಂದು ಬೆಳಗ್ಗೆ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆಯಲಿದೆ.
‘ದುಬಾರಿ’ ನಿಂತರೂ, ಧ್ರುವ ಅಭಿನಯದಲ್ಲಿ ಬೇರೊಂದು ಸಿನಿಮಾ ನಿರ್ವಿುಸುತ್ತಿರುವುದಾಗಿ ನಿರ್ವಪಕ ಉದಯ್ ಮೆಹ್ತಾ ಕಳೆದ ತಿಂಗಳೇ ಹೇಳಿದ್ದರು. ಬೇರೊಂದು ತಂಡವು ಕಥೆ ಬರೆಯುವುದರಲ್ಲಿ ಬಿಜಿಯಾಗಿದ್ದು, ಸದ್ಯದಲ್ಲೇ ಯಾರು ಚಿತ್ರ ನಿರ್ದೇಶಿಸುತ್ತಾರೆ ಎಂಬ ವಿಷಯವನ್ನು ಅಧಿಕೃತವಾಗಿ ಹೇಳುವುದಾಗಿ ಹೇಳಿದ್ದರು. ಉದಯ್ ಮೆಹ್ತಾ ಹೇಳದಿದ್ದರೂ, ಧ್ರುವ ಅಭಿನಯದ ಮುಂದಿನ ಚಿತ್ರವನ್ನು ಎ.ಪಿ. ಅರ್ಜುನ್ ನಿರ್ದೇಶಿಸಬಹುದು ಎಂಬ ಸುದ್ದಿ ಇದ್ದೇ ಇತ್ತು. ಅದೀಗ ಅಧಿಕೃತವಾಗಿದೆ ಅಷ್ಟೇ. ಸದ್ಯ ಸ್ಕ್ರಿಪ್ಟ್ ಪೂಜೆ ನಡೆಯಲಿದ್ದು, ಮುಂದಿನ ತಿಂಗಳು ಮುಹೂರ್ತ ನೆರವೇರಲಿದೆ. ಅಷ್ಟರಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಅಧಿಕೃತವಾಗಲಿದೆ. ಅಂದಹಾಗೆ, ಧ್ರುವ ಮತ್ತು ಅರ್ಜುನ್ ಒಂಬತ್ತು ವರ್ಷಗಳ ನಂತರ ಜತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ, ‘ಅದ್ದೂರಿ’ ಮೂಲಕ ಧ್ರುವ ಅವರನ್ನು ಪರಿಚಯಿಸಿದ್ದ ಅರ್ಜುನ್, ಆ ನಂತರ ಧ್ರುವ ಜತೆಗೆ ಇನ್ನೊಂದು ಚಿತ್ರ ಮಾಡುವುದಾಗಿ ಹೇಳುತ್ತಲೇ ಇದ್ದರು. ಅದೀಗ ಸಾಧ್ಯವಾಗುತ್ತಿದೆ.