

ಹೈದರಾಬಾದ್: ಸಿನಿಮಾದಲ್ಲಿ ನಟ-ನಟಿಯರ ನಖರಾ ಬಹಳ ಸಹಜ. ಈ ಬಗ್ಗೆ ಆಡಲಿಕ್ಕೂ ಆಗದೇ, ಅನುಭವಿಸಲಿಕ್ಕೂ ಆಗದೇ ಎಷ್ಟೋ ನಿರ್ಮಾಪಕರು-ನಿರ್ದೇಶಕರು ಒಳಗೊಳಗೇ ನೋವು ತಿನ್ನುತ್ತಾರೆ. ಆದರೆ, ಅರ್ಜುನ್ ಸರ್ಜಾ ಮಾತ್ರ ನಖರಾ ಮಾಡಿದ ತಮ್ಮ ಹೊಸ ಚಿತ್ರದ ನಾಯಕನನ್ನು ನಿರ್ದಾಕ್ಷಿಣ್ಯವಾಗಿ ಚಿತ್ರತಂಡದಿಂದ ಕೈಬಿಟ್ಟಿದ್ದಾರೆ.
ಅರ್ಜುನ್ ಸರ್ಜಾ ತಮ್ಮ ಮಗಳು ಐಶ್ವರ್ಯಾ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಹೊಸ ಚಿತ್ರವೊಂದನ್ನು ಕೆಲವು ತಿಂಗಳುಗಳ ಹಿಂದೆ ಪ್ರಾರಂಭಿಸಿದ್ದರು. ವಿಶ್ವಕ್ ಸೇನ್ ಮತ್ತು ಐಶ್ವರ್ಯಾ ಅಭಿನಯದ ಈ ಚಿತ್ರದ ಮುಹೂರ್ತಕ್ಕೆ ಪವನ್ ಕಲ್ಯಾಣ್, ಪ್ರಕಾಶ್ ರೈ ಸೇರಿದಂತೆ ಹಲವರು ಬಂದು ಚಿತ್ರತಂಡ್ಕ್ಕೆ ಶುಭ ಹಾರೈಸಿದ್ದರು. ಈಗ ಆ ಚಿತ್ರತಂಡದಿಂದ ನಾಯಕ ವಿಶ್ವಕ್ ಸೇನ್ ಅವರನ್ನು ಕೈಬಿಟ್ಟಿದ್ದಾರೆ ಅರ್ಜುನ್ ಸರ್ಜಾ.
ವಿಶ್ವಕ್ ಸೇನ್ ಅವರನ್ನು ಕೈಬಿಡುವುದಕ್ಕೆ ಮುಖ್ಯ ಕಾರಣ ಅವರ ನಖರಾ. ಚಿತ್ರವನ್ನು ಒಪ್ಪಿಕೊಂಡ ವಿಶ್ವಕ್, ಆ ನಂತರ ಚಿತ್ರೀಕರಣಕ್ಕೆ ಬರದೆ ಕೈಕೊಡುವುದಕ್ಕೆ ಪ್ರಾರಂಭಿಸಿದ್ದರು. ಇತ್ತೀಚೆಗೆ ಕೇರಳದಲ್ಲಿ ಒಂದು ದೊಡ್ಡ ಹಂತದ ಚಿತ್ರೀಕರಣವನ್ನು ಪ್ಲಾನ್ ಮಾಡಿದ್ದರಂತೆ ಅರ್ಜುನ್. ಇದಕ್ಕೆ ಬರುವುದಕ್ಕೆ ಪ್ರಾಮಿಸ್ ಮಾಡಿದ್ದ ವಿಶ್ವಕ್, ಕೊನೆಯ ಘಳಿಗೆಯಲ್ಲಿ ಏನೋ ಹೇಳಿ ತಪ್ಪಿಸಿಕೊಂಡಿದ್ದಾರೆ. ಇದರಿಂದ ಅರ್ಜುನ್ ಸರ್ಜಾ ಅವರಿಗೆ ಸಾಕಷ್ಟು ನುಕ್ಸಾನು ಆಗಿದೆ. ಇದೆಲ್ಲದರಿಂದ ನೊಂದ ಅವರು, ಇದೀಗ ಚಿತ್ರತಂಡದಿಂದ ವಿಶ್ವಕ್ ಅವರನ್ನು ಹೊರಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಅರ್ಜುನ್ ಸರ್ಜಾ, 'ಕಥೆ ಇಷ್ಟಪಟ್ಟು ಚಿತ್ರದಲ್ಲಿ ನಟಿಸುವುದಕ್ಕೆ ವಿಶ್ವಕ್ ಒಪ್ಪಿಕೊಂಡಿದ್ದರು. ಅವರು ಕೇಳಿದ ಸಂಭಾವನೆ ಕೊಡುವುದಕ್ಕೆ ನಾವು ತಯಾರಿದ್ದೆವು. ಆದರೆ, ಅವರು ಚಿತ್ರೀಕರಣಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಕೇರಳದಲ್ಲಿ ಶೂಟಿಂಗ್ ಪ್ಲಾನ್ ಮಾಡಿದ್ದೆವು. ಜಗಪತಿ ಬಾಬು ಮುಂತಾದ ದೊಡ್ಡ ನಟರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ವಿಶ್ವಕ್ ಬರದೆ ಕೈಕೊಟ್ಟಿದ್ದರಿಂದ, ಎಲ್ಲರ ಡೇಟ್ಸ್ ಕೈತಪ್ಪಿದಂತಾಗಿದೆ. ನನ್ನ ಜೀವನದಲ್ಲಿ ವಿಶ್ವಕ್ಗೆ ಮಾಡಿದಷ್ಟು ಫೋನ್ ಕಾಲ್ಗಳನ್ನು ಬೇರೆ ಯಾರಿಗೂ ಮಾಡಿರಲಿಲ್ಲ' ಎಂದು ಬೇಸರದಿಂದಲೇ ಹೇಳಿಕೊಂಡಿದ್ದಾರೆ ಅರ್ಜುನ್.
'ಅಲ್ಲು ಅರ್ಜುನ್, ರಾಮ್ಚರಣ್ ಮುಂತಾದ ದೊಡ್ಡ ಸ್ಟಾರ್ ನಟರು ಬಹಳ ವಿನಮ್ರರಾಗಿ ನಡೆದುಕೊಳ್ಳುತ್ತಾರೆ. ವೃತ್ತಿಪರವಾಗಿ ಕೆಲಸ ಮಾಡುತ್ತಾರೆ. ಆದರೆ, ವಿಶ್ವಕ್ಗೆ ವೃತ್ತಿಪರತೆ ಎಂದರೇನು ಗೊತ್ತಿಲ್ಲ. ಇಂಥ ಸಂದರ್ಭದಲ್ಲಿ ನನಗೆ ಅವರ ಜತೆಗೆ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ. ಅವರನ್ನು ಚಿತ್ರತಂಡದಿಂದ ಕೈಬಿಟ್ಟು, ಇನ್ನೊಬ್ಬರೊಂದಿಗೆ ಚಿತ್ರ ಮುಂದುವರೆಸುವ ಯೋಚನೆ ಇದೆ' ಎಂದು ಹೇಳಿಕೊಂಡಿದ್ದಾರೆ. ವಿಶ್ವಕ್ ಬದಲು ಬೇರೆ ಯಾರು ಬರುತ್ತಾರೆ ಎಂದು ಇನ್ನಷ್ಟೇ ಕಾದು ನೋಡಬೇಕಿದೆ.