

ಬೆಂಗಳೂರು: ನಾನು ಡ್ರಗ್ಸ್ ಸೇವಿಸಿರುವುದಾಗಿ ಕೇಳಿ ಬರುತ್ತಿರುವ ಆರೋಪ ಸುಳ್ಳು. ನನಗೆ ಅಂತಹ ವಿಚಾರದ ಬಗ್ಗೆ ಮಾಹಿತಿಯೇ ಇಲ್ಲ ಎಂದು ನಿರೂಪಕಿ ಅನುಶ್ರೀ ಸ್ಪಷ್ಟಪಡಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಅನುಶ್ರೀ, ನಾನು ಬಹಳ ಸರಳ ವ್ಯಕ್ತಿ. ಕೆಲಸಕ್ಕೆ ಹೋಗುತ್ತೇನೆ, ಬರುತ್ತೇನೆ. ಯಾವ ಪಾರ್ಟಿ, ಪಬ್ ಸೇರಿ ಎಲ್ಲೂ ಹೋಗುವುದಿಲ್ಲ. ನಾನು ಸತ್ಯವಾಗಿದ್ದೇನೆ. ಕಳೆದ ಬಾರಿ ವಿಚಾರಣೆಗೆ ಕರೆದಾಗ ನನ್ನ ಕಡೆಯಿಂದ ಏನೇನು ಹೇಳಬೇಕಿತ್ತು ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದೇನೆ. ಕಾನೂನಿನ ಪ್ರಕಾರ ಅಂದು ಉತ್ತರ ಕೊಟ್ಟಿದ್ದೇನೆ, ಇಂದೂ ಉತ್ತರ ಕೊಟ್ಟಿದ್ದೇನೆ ಎಂದಿದ್ದಾರೆ.
ಯಾರು ಏನು ಬೇಕಾದರೂ ಆರೋಪಿಸುತ್ತಾರೆ. ಪೊಲೀಸರು ಕಾನೂನಿನಲ್ಲಿ ಯಾವುದು ಸರಿ-ತಪ್ಪು ಎಂಬುದನ್ನು ಪರಿಶೀಲಿಸುತ್ತಾರೆ. 2007ರಲ್ಲಿ ಶೋ ವೊಂದರ ಫಿನಾಲೆಯಲ್ಲಿ ಕಿಶೋರ್ ಕೊರಿಯೋಗ್ರಾಫರ್ ಆಗಿ ಬಂದಿದ್ದರು. ನಾನು ಆ ಫಿನಾಲೆಯಲ್ಲಿ ಗೆದ್ದಿದ್ದೇನೆ. ಎಲ್ಲರಿಗೂ ಊಟ ಕೊಡಿಸಿದ್ದೇನೆ. ನೀವು ಅಲ್ಲಿ ಡ್ರಗ್ಸ್ ಸೇವನೆ ಮಾಡಿದ್ದೀರಿ ಎಂದು ಹೇಳುವುದು ತಪ್ಪು. ನನ್ನ ಮೇಲೆ ನೂರು ಆರೋಪ ಬರಬಹುದು. ಆರೋಪವೆಲ್ಲ ಸತ್ಯವಾಗುವುದಿಲ್ಲ. 12 ವರ್ಷದ ಹಿಂದೆ ಕಿಶೋರ್ ಜತೆ ಮಾತನಾಡಿದ್ದೆ ಎಂದರು.
ನಾನು ಕೋಟ್ಯಂತರ ರೂ. ಆಸ್ತಿ ಹೊಂದಿಲ್ಲ: ನಾನು ಯಾವ ಪ್ರಭಾವಿಗಳಿಗೂ ಕರೆ ಮಾಡಲಿಲ್ಲ. ನನಗೆ ಯಾರ ಸಹಾಯದ ಅಗತ್ಯವಿಲ್ಲ. ನಾನು ಬೆಂಗಳೂರಿಗೆ ಒಬ್ಬಳೇ ಬಂದಿದ್ದೇನೆ. ಇನ್ನೂ ಒಬ್ಬಳೇ ಇದ್ದೀನಿ. ಒಬ್ಬಳೇ ಹೋರಾಟ ಮಾಡುತ್ತೇನೆ. ನನಗೆ ಯಾವ ಪ್ರಭಾವಶಾಲಿಗಳ ಸಹಾಯ ಬೇಕಿಲ್ಲ. 12 ಕೋಟಿ ರೂ. ಆಸ್ತಿ ಹೊಂದಿದ್ದೇನೆ ಎಂಬುದು ಸುಳ್ಳು. ನಾನು ಕಳೆದ ಮೂರೂವರೆ ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಈ ಹಿಂದೆ ಪೇಯಿಂಗ್ ಗೆಸ್ಟ್‌ನಲ್ಲಿ ವಾಸಿಸುತ್ತಿದ್ದೆ. ನಾನು ಕಷ್ಟಪಟ್ಟು ದುಡಿದ ಹಣದಲ್ಲಿ ಮಂಗಳೂರಿನಲ್ಲಿ 1 ಮನೆ ಖರೀದಿಸಿದ್ದೇನೆ. ಮಂಗಳೂರಿನಲ್ಲಿರುವ ಮನೆಯ ಮೇಲೆ ಇನ್ನೂ ಸಾಲ ಇದೆ. ಕೆಲಸದ ನಿಮಿತ್ತ ಬೆಂಗಳೂರಿನಿಂದ ಮುಂಬೈಗೆ ಹೋಗಲು ಸೋಮವಾರ ನಾನು ವಿಮಾನದ ಟಿಕೆಟ್ ಬುಕ್ ಮಾಡಿದ್ದೆ. ರಿಟರ್ನ್ ಟಿಕೆಟನ್ನೂ ಅದೇ ದಿನ ಮಾಡಿದ್ದೇನೆ. ನಾನು ಎಲ್ಲೂ ಓಡಿ ಹೋಗಲ್ಲ ಎಂದರು.
ಪ್ರಶಾಂತ್ ಸಂಬರಗಿ ಪರಿಚಯವಿಲ್ಲ: ತರುಣ್ ಡ್ಯಾನ್ಸ್ ತರಬೇತಿ ಸಂಸ್ಥೆ ಉದ್ಘಾಟನೆಗೊಳಿಸಲು 5 ವರ್ಷದ ಹಿಂದೆ ಮಂಗಳೂರಿಗೆ ಹೋಗಿದ್ದೆ. ನಂತರ ಅವರನ್ನು ಭೇಟಿಯಾಗಿಲ್ಲ. ನಾನು ಡ್ರಗ್ಸ್ ಪೆಡ್ಲರ್ ಅಥವಾ ಗ್ರಾಹಕರಾಗಿದ್ದೇನೆ ಎಂಬ ಆರೋಪದ ಮೇಲೆ ಪೊಲೀಸರು ವಿಚಾರಣೆಗೆ ಕರೆದಿಲ್ಲ. ಅವರ ಪರಿಚಯವಿದ್ದ ಹಿನ್ನೆಲೆಯಲ್ಲಿ ನನ್ನನ್ನು ಕರೆದಿದ್ದಾರೆ. ವಿಚಾರಣೆ ವೇಳೆ ಕೇಳಿದ ಎಲ್ಲ ಪ್ರಶ್ನೆಗೂ ಉತ್ತರಿಸಿದ್ದೇನೆ. ನಾನು ಇಲ್ಲಿಗೆ ಬಂದು 15 ವರ್ಷಗಳಾಗಿವೆ. ನನಗೆ ಪ್ರಶಾಂತ್ ಸಂಬರಗಿ ಪರಿಚಯ ಇಲ್ಲ. ನನ್ನ ಬಗ್ಗೆ ನೂರಾರು ಜನ ನೂರಾರು ಥರ ಮಾತನಾಡುತ್ತಾರೆ. ಎಲ್ಲರಿಗೂ ಸ್ಪಷ್ಟನೆ ಕೊಡಲು ಆಗುವುದಿಲ್ಲ. ಇಂತಹ ಆರೋಪದಿಂದ ನನ್ನ ಆತ್ಮವಿಶ್ವಾಸ ಕುಗ್ಗುವುದಿಲ್ಲ ಎಂದು ಅನುಶ್ರೀ ಹೇಳಿದ್ದಾರೆ.
ತಾಯಿಯ ಆರೋಗ್ಯ ಏರುಪೇರಾದರೆ ಬಿಡುವುದಿಲ್ಲ: ನನ್ನ ಮೇಲೆ ಹೊರಿಸುತ್ತಿರುವ ಆರೋಪದಿಂದ ನನ್ನ ತಾಯಿಯ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಅದು ಯಾರೇ ಆಗಲಿ, ಎಷ್ಟು ದೊಡ್ಡವರೇ ಆಗಲಿ, ಎಂಥವರೇ ಆಗಲಿ ನಾನು ಬಿಡಲ್ಲ ಎಂದು ಅನುಶ್ರೀ ಹೇಳಿದ್ದಾರೆ.