ಇಂದು ಅನುಪಮ್​ ಖೇರ್​ ಪಾಲಿಗೆ ವಿಶೇಷ ದಿನ ... ಯಾಕೆ?

Anupam Kher - Final
Published on

ಮುಂಬೈ: ಬಾಲಿವುಡ್​ ಕಂಡ ಅದ್ಭುತ ನಟ ಅನುಪಮ್​ ಖೇರ್​ ಪಾಲಿಗೆ ಇಂದು ಬಹಳ ವಿಶೇಷವಾದ ದಿನ. ಇಂದೇನು ಅವರ ಹುಟ್ಟುಹಬ್ಬವಾ ಅಥವಾ ಮದುವೆ ವಾರ್ಷಿಕೋತ್ಸವವಾ ಎಂಬ ಪ್ರಶ್ನೆ ಬರಬಹುದು. ಅನುಪಮ್​ ಖೇರ್​ ಅಭಿನಯದ ಮೊದಲ ಚಿತ್ರ 'ಸಾರಂಶ್​' ಬಿಡುಗಡೆಯಾಗಿ ಇಂದಿಗೆ 37 ವರ್ಷ. ಈ ವಿಷಯವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಅನುಪಮ್​, ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದರೂ, ಟೈಟಲ್​ ಕಾರ್ಡ್​ನಲ್ಲಿ ತಮ್ಮ ಹೆಸರು ಬಂದಾಗ ಭಾವುಕರಾಗುತ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಚಿತ್ರರಂಗಕ್ಕೆ ಬಂದು 37 ವರ್ಷಗಳಾದವು. ಇದುವರೆಗೂ 518 ಚಿತ್ರಗಳಲ್ಲಿ ನಟಿಸಿದ್ದೇನೆ. ಈಗಲೂ ನನ್ನ ಹೆಸರು ತೆರೆಯ ಮೇಲೆ ಕಂಡಾಗ ಭಾವುಕನಾಗುತ್ತೇನೆ. ಏಕೆಂದರೆ, ಸಾಧಾರಣ ಕುಟುಂಬದಿಂದ ಬಂದವನು ನಾನು. ನನಗೆ ಚಿತ್ರರಂಗದ ಹಿನ್ನೆಲೆ ಇರಲಿಲ್ಲ. ಯಾವುದೇ ಹಿನ್ನೆಲೆ ಇಲ್ಲದಿದ್ದರೂ, ಇಷ್ಟು ದೂರ ನಡೆದು ಬಂದಿದ್ದೇನೆಂದರೆ ಅದು ಖುಷಿಯ ವಿಷಯವಲ್ಲವೇ?' ಎಂದು ಪ್ರಶ್ನಿಸುತ್ತಾರೆ ಅವರು.

'ಸಾರಾಂಶ್​' ಚಿತ್ರ ಮಾಡುವಾಗ, ಇಷ್ಟು ದೂರ ಸಾಗಿಬರಬಹುದು ಎಂದು ಅವರು ಯಾವತ್ತೂ ಯೋಚಿಸಿರಲಿಲ್ಲವಂತೆ. 'ಆ ಚಿತ್ರದಲ್ಲಿನ ನನ್ನ ಪಾತ್ರ ನಿಜಕ್ಕೂ ವಿಶಿಷ್ಟವಾದದ್ದು. 60ರ ವಯಸ್ಸಿನ ಹಿರಿಯನ ಪಾತ್ರ ಮಾಡುವಾಗ, ನನಗೆ 29 ವರ್ಷ ವಯಸ್ಸಾಗಿತ್ತು. ನಾನೇ ಆ ಪಾತ್ರ ಮಾಡಿದ್ದು ಎಂದರೆ ಯಾರೂ ನಂಬುತ್ತಿರಲಿಲ್ಲ. ಮೆಟ್ರೋ ಸಿನಿಮಾ ಮುಂದೆ ನಿಂತು ನನ್ನನ್ನು ಯಾರಾದರೂ ಗುರುತಿಸುತ್ತಾರಾ ಎಂದು ಕಾಯುತ್ತಿದ್ದೆ. ಆದರೆ, ಯಾರೂ, ಗುರುತಿಸುತ್ತಿರಲಿಲ್ಲ. ಕೊನೆಗೆ ಆ ಚಿತ್ರದಲ್ಲಿನ ನನ್ನ ಅಭಿನಯದ ಬಗ್ಗೆ ಜನಮನ್ನಣೆ ಸಿಕ್ಕಿತು ಮತ್ತು ಒಂದರ ಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಾ ಹೋದೆ' ಎಂದು ನೆನಪಿಸಿಕೊಳ್ಳುತ್ತಾರೆ ಅನುಪಮ್​ ಖೇರ್​.

'ಸಾರಾಂಶ್​' ಚಿತ್ರವನ್ನು ಈಗಿನ ಕಾಲಕ್ಕೆ ತಕ್ಕ ಹಾಗೆ ರೀಮೇಕ್​ ಮಾಡುವಾಸೆ ಇದೆ ಎಂದಿರುವ ಅನುಪಮ್​ ಖೇರ್​, 'ಆ ಕಥೆ ಹೇಳುವುದಕ್ಕೆ ಇದು ಸೂಕ್ತವಾದ ಸಮಯ. ಹಾಗಾಗಿ, ಆ ಚಿತ್ರವನ್ನು ರೀಮೇಕ್​ ಮಾಡುವ ಯೋಚನೆ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net