

ಬೆಂಗಳೂರು: ಸಂಚಾರಿ ವಿಜಯ್ ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಅದೇ ‘ಅಂತ್ಯವಲ್ಲ ಆರಂಭ’. ನಡಹಳ್ಳಿ ಶ್ರೀಪಾದರಾವ್, ಡಾ. ಎನ್.ಬಿ ಜಯಪ್ರಕಾಶ್ ಒಟ್ಟಿಗೆ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಸುಮತಿ ಉಡುಪ ಸಂಭಾಷಣೆ ಬರೆದರೆ, ಐದು ಹಾಡುಗಳಿಗೆ ಸುಹಾನ್ ಸಂಗೀತ ಸಂಯೋಜಿಸಿದ್ದಾರೆ. ಟಿ.ಕೆ. ಜಯರಾಮ್ ಕಥೆ ಬರೆದಿದ್ದಾರೆ.
ಈ ಚಿತ್ರದಲ್ಲಿ ನರಸಿಂಹರಾಜು ಮೊಮ್ಮಗ ಶಿಶಿರ, ವೆಂಕಟರಾಜು, ನಚಿಕೇತ್, ಹರ್ಷ, ಡಾ. ಎನ್.ಬಿ. ಜಯಪ್ರಕಾಶ್ ಸೇರಿ ಹಲವು ಪಾತ್ರವರ್ಗದಲ್ಲಿದ್ದಾರೆ. ನಾಗೇಶ್ ಆಚಾರ್ಯ ಛಾಯಾಗ್ರಹಣ ಈ ಚಿತ್ರಕ್ಕಿದೆ. ‘ಅಂತ್ಯವಲ್ಲ ಆರಂಭ ’ ಚಿತ್ರದ ಜತೆಯಲ್ಲಿಯೇ ಇನ್ನೂ ಹಲವು ಚಿತ್ರಗಳನ್ನು ತಂಡ ಘೋಷಣೆ ಮಾಡಿದೆ.
ಅಷ್ಟೇ ಅಲ್ಲ, ಇತ್ತೀಚೆಗೆ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಆ ಚಿತ್ರಗಳ ಶೀರ್ಷಿಕೆ ಅನಾವರಣ ಮಾಡಲಾಗಿದೆ. ‘ಬದುಕು ಜಟಕಾ ಬಂಡಿ’, ‘ಹೆಣ್ಣು’, ‘ಮಣ್ಣು’, ‘ನೇತ್ರದಾನ’ ಮತ್ತು ‘ಸಂತ ಕವಿ ಕನಕದಾಸ’ ಶೀರ್ಷಿಕೆಗಳನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಡಾ. ಭುಜಂಗ ಶೆಟ್ಟಿ, ಹಿರಿಯ ಪತ್ರಕರ್ತ ಜೋಗಿ, ಕರ್ನಾಟಕ ಚಲನಚಿತ್ರ ನಿರ್ವಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಶೀರ್ಷಿಕೆ ಅನಾವರಣಗೊಳಿಸಿದರು.