ನಿಧನರಾಗಿ ಆರು ವರ್ಷಗಳ ನಂತರ ಉದಯ್ ಅಭಿನಯದ ಚಿತ್ರವೊಂದು ಬಿಡುಗಡೆ!

Antharanga - Uday
Published on

ಬೆಂಗಳೂರು: ಕನ್ನಡದ ಜನಪ್ರಿಯ ನಟ ಉದಯ್​, 'ಮಾಸ್ತಿಗುಡಿ' ಚಿತ್ರದ ಚಿತ್ರೀಕರಣದಲ್ಲಿ ನಿಧನರಾಗಿ ಆರು ವರ್ಷಗಳಾಗಿವೆ. ಅದಕ್ಕೂ ಮುನ್ನ ಅವರು ನಟಿಸಿದ ಚಿತ್ರವೊಂದು ಇದೀಗ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಅದೇ 'ಅಂತರಂಗ'.

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ 'ಅಂತರಂಗ' ಸಿನಿಮಾದ ಮೊದಲ ಟೀಸರ್ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್, ರೂಪಿಕಾ, ಚಂದ್ರಕೀರ್ತಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು 'ಅಂತರಂಗ' ಸಿನಿಮಾದ ಟೀಸರ್ ಮತ್ತು ಹಾಡುಗಳ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

'ಅಂತರಂಗ' ಸಸ್ಪೆನ್ಸ್-ಥಿಲ್ಲರ್ ಶೈಲಿಯ ಚಿತ್ರವಾಗಿದ್ದು, ಈ ಕುರಿತು ಮಾತನಾಡುವ ನಟ ಮತ್ತು ನಿರ್ಮಾಪಕ ಲಕ್ಷ್ಮೀನಾರಾಯಣ ರಾಜು ಅರಸ್, 'ಮನುಷ್ಯನ 'ಅಂತರಂಗ'ವನ್ನು ತೆರೆದಿಡುವ ಕಥೆಯೇ 'ಅಂತರಂಗ'. ಗಂಡ-ಹೆಂಡತಿ ನಡುವಿನ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಮಧ್ಯ ಪ್ರವೇಶವಾದರೆ ಏನೆಲ್ಲ ನಡೆಯುತ್ತದೆ, ತುಂಬಿದ ಮನೆಯಲ್ಲಿ ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಕುಟುಂಬ ಹೇಗೆ ಪರಿತಪಿಸುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ' ಎನ್ನುತ್ತಾರೆ.

ಈ ಚಿತ್ರವನ್ನು ವಿಜಯಸೂರ್ಯ ನಿರ್ದೇಶನ ಮಾಡಿದ್ದಾರೆ. ಲಕ್ಷ್ಮೀನಾರಾಯಣ, ಶ್ರೇಯಾ ಪಾವನಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಉದಯ್​ ನಿಧನಕ್ಕೂ ಮೊದಲೇ ಬಹುತೇಕ ಮುಗಿದಿತ್ತು. ಈ ಆರು ವರ್ಷಗಳಲ್ಲಿ ಚಿತ್ರವನ್ನು ಮುಗಿಸಿರುವ ಚಿತ್ರತಂಡ ಜನವರಿ ಅಂತ್ಯಕ್ಕೆ ಚಿತ್ರ ಬಿಡುಗಡೆ ಮಾಡುವುದಕ್ಕೆ ಉದ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net