ದರ್ಶನ್​ ಅಭಿಮಾನಿಗಳಿಗೆ ಸಿಗ್ತು ಹೊಸ ಗಿಫ್ಟ್​!

Robert Final
Robert
Published on

‘ರಾಬರ್ಟ್​’ ಚಿತ್ರದ ಟೀಸರ್​ ಬಿಡಿ, ಟ್ರೇಲರ್​ ರಿಲೀಸ್​ ಮಾಡಿ ಎಂದು ದರ್ಶನ್​ ಅವರ ಅಭಿಮಾನಿಗಳು, ಚಿತ್ರತಂಡದವರನ್ನು ಕೇಳುತ್ತಲೇ ಇದ್ದಾರೆ. ಆದರೆ, ಸದ್ಯಕ್ಕೆ ಚಿತ್ರ ಬಿಡುಗಡೆಯಾಗುವಂತಿಲ್ಲ. ಹಾಗಾಗಿ ಇಷ್ಟು ಬೇಗ ಬಿಡುಗಡೆ ಮಾಡಿ ಏನು ಮಾಡುವುದು ಎಂಬುದು ಚಿತ್ರತಂಡದ ಪ್ರಶ್ನೆ. ಹಾಗಾಗಿ ಅಭಿಮಾನಿಗಳನ್ನು ಖುಷಿಪಡಿಸುವುದಕ್ಕೆ ಒಂದೊಂದು ಹಬ್ಬದ ಸಂದರ್ಭದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಏನಾದರೊಂದು ಬಿಡುಗಡೆ ಮಾಡುತ್ತಲೇ ಇದೆ.

ಈ ಹಿಂದೆ ರಮನವಮಿಯ ಪ್ರಯುಕ್ತ ಜೈ ಶ್ರೀರಾಮ್​ ಹಾಡಿನ ಹೊಸ ವರ್ಷನ್​ ಬಿಡುಗಡೆ ಮಾಡುವುದರ ಜತೆಗೆ, ಚಿತ್ರದ ಒಂದು ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಇದೀಗ ರಂಜಾನ್​ ಪ್ರಯುಕ್ತ ಇನ್ನೊಂದು ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಈ ಮೂಲಕ ದರ್ಶನ್​ ಅಭಿಮಾನಿಗಳಿಗೆ ಚಿತ್ರತಂಡ ಹೊಸದೊಂದು ಗಿಫ್ಟ್​ ನೀಡಿದೆ.

ಕಳೆದ ವಾರವಷ್ಟೇ ನಿರ್ದೇಶಕ ತರುಣ್​ ಸುಧೀರ್, ರಂಜಾನ್​ ಹಬ್ಬದ ಪ್ರಯುಕ್ತ ದರ್ಶನ್​ ಅಭಿಮಾನಿಗಳಿಗೆ ಥೀಮ್​ ಪೋಸ್ಟರ್​ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಈ ಥೀಮ್ ಪೋಸ್ಟರ್​ ಹೇಗಿರಬಹುದು ಎಂದು ದರ್ಶನ್​ ಅವರ ಅಭಿಮಾನಿಗಳು ತುದಿಗಾಲಲ್ಲಿ ಕಾದಿದ್ದರು. ಅದರಂತೆ, ಇದೀಗ ಹಬ್ಬದ ಪ್ರಯುಕ್ತ ಚಿತ್ರದ ಇನ್ನೊಂದು ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ದರ್ಶನ್​ ಅವರು ತಮ್ಮ ಟ್ವಿಟರ್​ ಅಕೌಂಟ್​ ಮೂಲಕ ಈ ಪೋಸ್ಟರ್​ ಬಿಡುಗಡೆ ಮಾಡುವುದರ ಜತೆಗೆ, ರಂಜಾನ್​ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅಷ್ಟೇ ಅಲ್ಲ, ಎಲ್ಲರ ಜೀವನಶೈಲಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೇ, ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ರಾಬರ್ಟ್​’ ಸಿನಿಮಾ ಬಿಡುಗಡೆಯಾಗಿಯೇ ಒಂದೂವರೆ ತಿಂಗಳಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಚಿತ್ರದ ಬಿಡುಗಡೆ ಅನಿರ್ಧಿಷ್ಟಾವಧಿಗೆ ಮುಂದಕ್ಕೆ ಹೋಗಿದೆ. ಕೆಲವು ದಿನಗಳ ಹಿಂದೆ, ಆಗಸ್ಟ್​ 15ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ತರುಣ್​ ಹೇಳುವಂತೆ, ಚಿತ್ರತಂಡ ಇದುವರೆಗೂ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲವಂತೆ. ಲಾಕ್​ಡೌನ್​ ಮುಗಿದು, ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವಂತಾದ ಮೇಲೆ, ನೋಡಿಕೊಂಡು ಚಿತ್ರ ಬಿಡುಗಡೆ ಮಾಡುವುದಾಗಿ ತರುಣ್ ಹೇಳಿಕೊಂಡಿದ್ದಾರೆ.

‘ರಾಬರ್ಟ್’ ಚಿತ್ರದಲ್ಲಿ ದರ್ಶನ್​, ಆಶಾ ಭಟ್​, ಜಗಪತಿ ಬಾಬು, ವಿನೋದ್​ ಪ್ರಭಾಕರ್​ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ-ಚಿತ್ರಕಥೆಯನ್ನೂ ರಚಿಸಿದ್ದಾರೆ ತರುಣ್​ ಸುಧೀರ್​. ಚಿತ್ರವನ್ನು ಉಮಾಪತಿ ಗೌಡ ನಿರ್ಮಿಸಿದ್ದು, ಅರ್ಜುನ್​ ಜನ್ಯ ಮ್ಯೂಸಿಕ್​ ಕಂಪೋಸ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net