ಸಲ್ಮಾನ್​ ಖಾನ್​ ಅಭಿಮಾನಿಗಳಿಗೆ ಯಾಕೆ ಬೇಸರ?

Salman Khan Final
Published on

ರಂಜಾನ್ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವ ಸಂಪ್ರದಾಯವನ್ನು ಹಲವು ವರ್ಷಗಳಿಂದ ತಪ್ಪದೇ ಪಾಲಿಸಿಕೊಂಡು ಬಂದಿರುವ ಸಲ್ಮಾನ್, ಈ ಬಾರಿ ಅಂಥದ್ದೊಂದು ಅವಕಾಶ ಮಿಸ್ ಮಾಡಿಕೊಂಡಿದ್ದಾರೆ. ಆರು ವರ್ಷಗಳ ನಂತರ, ಇದೇ ಮೊದಲ ಬಾರಿಗೆ ಅವರ ಯಾವ ಸಿನಿಮಾ ಸಹ ರಂಜಾನ್ ಸಮಯದಲ್ಲಿ ಬಿಡುಗಡೆಯಾಗುತ್ತಿಲ್ಲ. ಇದರಿಂದ ಸಲ್ಲು ಅಭಿಮಾನಿಗಳು ಬಹಳ ಬೇಸರಗೊಂಡಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸಲ್ಮಾನ್ ಅಭಿನಯದ ‘ರಾಧೆ - ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಎಂಬ ಚಿತ್ರ, ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಚಿತ್ರದ ಬಹುತೇಕ ಶೂಟಿಂಗ್ ಸಹ ಮುಗಿದಿತ್ತು. ಆದರೆ, ಅಷ್ಟರಲ್ಲಿ ಲಾಕ್‌ಡೌನ್ ಶುರುವಾಗಿದ್ದರಿಂದ, ಚಿತ್ರದ ಕೆಲಸಗಳು ನಿಂತು ಹೋದವು. ಒಂದು ಪಕ್ಷ, ಚಿತ್ರದ ಶೂಟಿಂಗ್ ಮುಗಿದಿದ್ದರೂ, ಲಾಕ್‌ಡೌನ್‌ನಿಂದ ಈ ಬಾರಿ ಚಿತ್ರ ಪ್ರದರ್ಶನವಾಗುವ ಅವಕಾಶ ಇರಲಿಲ್ಲ.

ಸಲ್ಮಾನ್​ಗೂ ರಂಜಾನ್​ ಹಬ್ಬಕ್ಕೂ ಹಳೆಯ ನಂಟು. ಸಲ್ಮಾನ್ ಅಭಿನಯದ ಚಿತ್ರವೊಂದು ರಂಜಾನ್ ಸಂದರ್ಭದಲ್ಲಿ ಮೊದಲು ಬಿಡುಗಡೆಯಾಗಿದ್ದು 2009ರಲ್ಲಿ. ಅದೇ ‘ವಾಂಟೆಡ್’. ಈ ಚಿತ್ರ ಹಿಟ್ ಆಯಿತು. 2010ರಲ್ಲಿ ‘ದಬಾಂಗ್’ ಬಿಡುಗಡೆಯಾಗಿ, ಸೂಪರ್ ಹಿಟ್ ಆಯಿತು. ಅಲ್ಲಿಂದ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಲ್ಮಾನ್ ಅಭಿನಯದ ಒಂದಾದರೂ ಸಿನಿಮಾ ಬಿಡುಗಡೆಯಾಗುತ್ತಲೇ ಇದೆ,

ಈ ಸಂಪ್ರದಾಯ 2013ರಲ್ಲಿ ಒಮ್ಮೆ ಬ್ರೇಕ್​ ಆಗಿತ್ತು. ಅದಕ್ಕೆ ಕಾರಣ, ಆ ವರ್ಷ ಶಾರೂಖ್ ಖಾನ್ ಅಭಿನಯದ ‘ಚೆನ್ನೈ ಎಕ್ಸ್‌ಪ್ರೆಸ್’ ಬಿಡುಗಡೆಯಾಗಿತ್ತು. ಮತ್ತೆ 2014ರಿಂದ ಪ್ರತಿ ವರ್ಷ ರಂಜಾನ್​ ಸೀಸನ್​ನಲ್ಲಿ ಸಲ್ಮಾನ್​ ಅಭಿನಯದ ಒಂದಾದರೂ ಚಿತ್ರ ಬಿಡುಗಡೆಯಾಗಿತ್ತು. ಇಲ್ಲಿಯವರೆಗೂ ನೋಡಿದರೆ, ಒಂದೋ ಅಥವಾ ಎರಡೋ ಚಿತ್ರಗಳು ಫ್ಲಾಪ್​ ಆಗಿದ್ದು ಬಿಟ್ಟರೆ, ಮಿಕ್ಕಂತೆ ಈ ಸಮಯದಲ್ಲಿ ಬಿಡುಗಡೆಯಾದ ಬಹುತೇಕ ಚಿತ್ರಗಳು ಸೂಪರ್​ ಹಿಟ್​ ಆಗಿದ್ದವು. ಅದೇ ಕಾರಣಕ್ಕೆ, ಪ್ರತೀ ವರ್ಷ ರಂಜಾನ್​ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಸಲ್ಮಾನ್​ ಮುಂದಾಗುತ್ತಿದ್ದರು.

ಹೀಗೆ ಕಡ್ಡಾಯವಾಗಿ ರಂಜಾನ್​ ಸೀಸನ್‌ನಲ್ಲಿ ದರ್ಶನ ಕೊಡುತ್ತಿದ್ದ ಸಲ್ಮಾನ್, ಈ ಬಾರಿ ಮಿಸ್ ಆಗಲಿದ್ದಾರೆ.

ಹಬ್ಬದ ಸ್ಪೆಶಲ್
2009 - ವಾಂಟೆಡ್
2010 - ದಬಾಂಗ್
2011 - ಬಾಡಿಗಾರ್ಡ್
2012 - ಏಕ್ ಥಾ ಟೈಗರ್
2014 - ಕಿಕ್
2015 - ಭಜರಂಗಿ ಬಾಯಿಜಾನ್
2016 - ಸುಲ್ತಾನ್
2017 - ಟ್ಯೂಬ್‌ಲೈಟ್
2018 - ರೇಸ್ 3
2019 - ಭಾರತ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net