

ಬೆಂಗಳೂರು: ಅನೂಪ್ ರೇವಣ್ಣ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಏಳು ವರ್ಷಗಳೇ ಆಗಿತ್ತು. 'ಲಕ್ಷ್ಮಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಮಗ ಅನೂಪ್, ಆ ನಂತರ 2017ರಲ್ಲಿ ಬಿಡುಗಡೆಯಾದ 'ಪಂಟ' ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು. ಈಗ ಸುಮಾರು ಏಳು ವರ್ಷಗಳ ಗ್ಯಾಪ್ನ ಬಳಿಕ ಪುನಃ ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಮೂಲಕ ಅನೂಪ್ ರೀಎಂಟ್ರಿ ಕೊಡುತ್ತಿದ್ದಾರೆ.
'ಕಬ್ಜ' ಚಿತ್ರದಲ್ಲಿ ಅನೂಪ್ ಒಂದು ಉಪೇಂದ್ರ ಅವರ ಸ್ನೇಹಿತ ಹಾಗೂ ಬಲಗೈಬಂಟನಾಗಿ ಕಾಣಿಸಿಕೊಂಡಿದ್ದಾರಂತೆ. ಈ ಕುರಿತು ಮಾತನಾಡುವ ಅವರು, 'ಉಪ್ಪಿ ಸಾರ್ ಬಲಗೈಬಂಟನಾಗಿ ನಟಿಸಿದ್ದೇನೆ. ಅವರ ಜತೆಗೆ ನಾನು ಸಹ ಭೂಗತಲೋಕದಲ್ಲಿ ಬೆಳೆಯುತ್ತೇನೆ. ಚಿತ್ರದಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿದೆ' ಎನ್ನುತ್ತಾರೆ ಅನೂಪ್.
ಪಾತ್ರದ ಜತೆಗೆ ಚಿತ್ರದ ಭಾಗವಾಗಿದ್ದೇ ಒಂದು ಅದ್ಭುತ ಅನುಭವ ಎಂದು ಬಣ್ಣಿಸುತ್ತಾರೆ ಅವರು. 'ಉಪ್ಪಿ ಸಾರ್ ನಿರ್ದೇಶಕರಾಗಿ, ನಟರಾಗಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು. ಅವರ ಜೊತೆಗೆ ನಾಲ್ಕು ವರ್ಷ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರಿಂದ ತುಂಬಾ ಕಲಿತಿದ್ದೇನೆ. ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆ. ನಾಲ್ಕು ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ. ಏಕೆಂದರೆ, ಚಿತ್ರದ ಕೆಲಸ ಅಷ್ಟಿತ್ತು. ಬರೀ ನಟನಾಗಿಯಷ್ಟೇ ಅಲ್ಲ, ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಚಿತ್ರದಿಂದ ತುಂಬಾ ಕಲಿತಿದ್ದೇನೆ' ಎನ್ನುತ್ತಾರೆ.
'ಕಬ್ಜ' ಅಲ್ಲದೆ, 'ಹೈಡ್ ಅಂಡ್ ಸೀಕ್' ಎಂಬ ಇನ್ನೊಂದು ಚಿತ್ರದಲ್ಲೂ ಅನೂಪ್ ನಟಿಸಿದ್ದು, ಅದು ಸಹ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆಯಂತೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.
'ಒಬ್ಬ ನಟನಾಗಿ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಿರಬೇಕು, ಪ್ರಯೋಗಗಳನ್ನು ಮಾಡುತ್ತಿರಬೇಕು ಎಂದು ನಂಬಿದವನು ನಾನು. ಅದಕ್ಕೆ ಸರಿಯಾಗಿ 'ಹೈಡ್ ಅಂಡ್ ಸೀಕ್' ಚಿತ್ರದಲ್ಲೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಇದರಲ್ಲಿ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಬೇರೆಬೇರೆ ತರಹದ ಪ್ರಯೋಗಗಳನ್ನು ಮಾಡುವ ಆಸೆ ಇದೆ' ಎನ್ನುತ್ತಾರೆ ಅನೂಪ್ ರೇವಣ್ಣ.