ಇದು ನನ್ನ ಚಿತ್ರವಲ್ಲ, ಚಂದ್ರು ಕನಸು; 'ಕಬ್ಜ' ಬಗ್ಗೆ ಉಪೇಂದ್ರ

Kabzaa 2
Published on

ಬೆಂಗಳೂರು: ಉಪೇಂದ್ರ ಮತ್ತು ಸುದೀಪ್​ ಅಭಿನಯದ 'ಕಬ್ಜ' ಚಿತ್ರವು ಇದೇ 17ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಟಿಕೆಟ್​ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಇನ್ನು, ಈ ಚಿತ್ರದ ಬಗ್ಗೆ ಮಾತನಾಡಿರುವ ಉಪೇಂದ್ರ, ಇದು ತಮ್ಮ ಚಿತ್ರವಲ್ಲ, ಚಂದ್ರು ಕನಸು ಎಂದು ಹೇಳಿಕೊಂಡಿದ್ದಾರೆ.

ಭಾನುವಾರ ಸಂಜೆ ಚಿತ್ರದ ಕುರಿತು ಮಾತನಾಡಿರುವ ಉಪೇಂದ್ರ, 'ಇದು ಚಂದ್ರ ಕನಸು. ಒಂದು ಪೈಸೆಯಷ್ಟೂ ನನ್ನ ಐಡಿಯಾ ಇಲ್ಲ. ಈ ಚಿತ್ರದ ಕಥೆ ಹೇಳುವುದಕ್ಕೆ ಅವರು ಬಂದಾಗ, ಇದನ್ನು ಹೇಗೆ ಮಾಡುತ್ತೀರಾ? ಎಂದು ಶಾಕ್​ನಿಂದ ಕೇಳಿದೆ. ಆ ನಂತರ ಅವರು ಫೋಟೋಶೂಟ್​ಗೆ ಕರೆದರು. ಅಲ್ಲಿ ಅವರು ಸೃಷ್ಟಿಸಿದ್ದ ಜಗತ್ತು ನೋಡಿ ನನಗೆ ವಿಶ್ವಾಸ ಬಂತು. ಇದೊಂದು ಸಂಪೂರ್ಣ ತಂತ್ರಜ್ನರ ಚಿತ್ರ. ಇಲ್ಲಿ ನಾನೊಬ್ಬ ಕಲಾವಿದ ಅಷ್ಟೇ' ಎನ್ನುತ್ತಾರೆ ಉಪೇಂದ್ರ.

ಕಳೆದ ನಾಲ್ಕು ವರ್ಷಗಳ ಚಿತ್ರದೊಂದಿಗಿನ ಪ್ರಯಾಣದ ಬಗ್ಗೆ ಮಾತನಾಡುವ ಅವರು, 'ಎರಡು ಕರೊನಾ ಅಲೆ, ಎರಡು ಲಾಕ್​ಡೌನ್​ನಿಂದ ಚಿತ್ರ ತಡವಾಯಿತು. ಇಲ್ಲದಿದ್ದರೂ ಚಂದ್ರು ಪ್ರತಿಯೊಂದು ದೃಶ್ಯವನ್ನೂ ಬಹಳ ಮುತ್ತುವರ್ಜಿಯಿಂದ ಶೂಟ್​ ಮಾಡಿದ್ದಾರೆ. ಎಷ್ಟೋ ಬಾರಿ ನಾನು ಬೆಳಿಗ್ಗೆಯೇ ಸೆಟ್​ಗೆ ಹೋದರೂ, ಚಿತ್ರೀಕರಣ ಮಾಡುತ್ತಿದ್ದುದು ಮಧ್ಯಾಹ್ನವೇ. ಈ ಚಿತ್ರಕ್ಕೆ ನಾನು 140 ದಿನಗಳಿಗೂ ಹೆಚ್ಚು ಕಾಲ್​ಶೀಟ್​ ಕೊಟ್ಟಿದ್ದೇನೆ. ಚಿತ್ರ ಸ್ವಲ್ಪ ನಿಧಾನವಾದರೂ ನಾನು ಮಾತನಾಡಲಿಲ್ಲ. ಪ್ರತಿದಿನ ನಾನು ಎಂಜಾಯ್​ ಮಾಡಿದ್ದೇನೆ. ಚಂದ್ರು ಪ್ರತಿ ಶಾಟ್​ ಸಹ ಸುಂದರವಾಗಿ ಸೆರೆಹಿಡಿದಿದ್ದಾರೆ' ಎನ್ನುತ್ತಾರೆ ಉಪೇಂದ್ರ.

ಸುದೀಪ್​ ಪಾತ್ರ ಮೊದಲಿನಿಂದಲೇ ಇತ್ತು ಎನ್ನುವ ಅವರು, 'ಸುದೀಪ್​ ಪಾತ್ರ ಮೊದಲಿನಿಂದಲೂ ಇತ್ತು. ಆ ಪಾತ್ರವನ್ನು ಒಬ್ಬ ದೊಡ್ಡ ನಟ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಯೋಚನೆ ಇತ್ತು. ಕೊನೆಗೆ ಸುದೀಪ್​ ಒಪ್ಪಿ ಚಿತ್ರಕ್ಕೆ ಸೇರ್ಪಡೆಯಾದರು' ಎನ್ನುತ್ತಾರೆ ಉಪೇಂದ್ರ. ಇನ್ನು, ಅವರ ಜತೆಗೆ ಉಪೇಂದ್ರ ತೆರೆ ಹಂಚಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ, ಚಿತ್ರ ನೋಡಿ ಎಂದು ಉತ್ತರಿಸುತ್ತಾರೆ ಅವರು.

'ಕಬ್ಜ' ಚಿತ್ರದ ಬಿಡುಗಡೆಗೆ ಕಾದಿರುವ ಉಪೇಂದ್ರ, ಆ ಚಿತ್ರವನ್ನು ಜನ ಹೇಗೆ ಸ್ವೀಕರಿಸಬಹುದು ಎಂಬ ಕುತೂಹಲದಲ್ಲಿದ್ದಾರಂತೆ. 'ಜನರಿಗೆ ಇಷ್ಟವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಒಬ್ಬ ಪ್ರೇಕ್ಷಕನಾಗಿ ನನಗಂತೂ ಚಿತ್ರದ ಬಗ್ಗೆ ಬಹಳ ಕುತೂಹಲವಿದೆ' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net