ದೀಪಾವಳಿಗೆ ರಜನಿಕಾಂತ್​ ಅಭಿನಯದ 'ಅಣ್ಣಾತ್ತೆ' ಬಿಡುಗಡೆ ...

Annatthe - Final
Published on

ಚೆನ್ನೈ: ರಜನಿಕಾಂತ್​ ಅಭಿನಯದ 'ಅಣ್ಣಾತ್ತೆ' ಚಿತ್ರದ ಚಿತ್ರೀಕರಣ ಮೇ​ನಲ್ಲೇ ಮುಗಿದಿತ್ತು. ಚಿತ್ರ ಬಿಡುಗಡೆ ಯಾವಾಗ ಎಂದು ರಜನಿಕಾಂತ್​ ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ಚಿತ್ರತಂಡವು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್​ ನಾಲ್ಕರಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಚಿತ್ರತಂಡದವರು ಘೋಷಣೆ ಮಾಡಿದ್ದು, ಬಿಡುಗಡೆ ದಿನಾಂಕ ಜತೆಗೆ ರಜನಿಕಾಂತ್​ ಅವರ ಹೊಸ ಪೋಸ್ಟರ್​ ಸಹ ಬಿಡುಗಡೆ ಮಾಡಿದೆ. ಸದ್ಯ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಒಂದಿಷ್ಟು ಪ್ಯಾಚ್​ವರ್ಕ್​ ಮಾತ್ರ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಅದನ್ನೆಲ್ಲ ಮುಗಿಸಿ, ದೀಪಾವಳಿಗೆ ಚಿತ್ರ ಬಿಡುಗಡೆಯಾಗುತ್ತಿದೆ.

ಅಣ್ಣಾತ್ತೆ ಚಿತ್ರದ ಚಿತ್ರೀಕರಣ 2020ರಲ್ಲಿ ಆರಂಭವಾಗಿತ್ತು. ಒಂದಿಷ್ಟು ಭಾಗದ ಚಿತ್ರೀಕರಣದ ನಂತರ ಲಾಕ್​ಡೌನ್​ನಿಂದ ಚಿತ್ರೀಕರಣ ನಿಂತಿತ್ತು. ಕರೊನಾ ಮೊದಲ ಅಲೆಯ ಅಬ್ಬರ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಚಿತ್ರತಂಡದವರು ಪುನಃ ಚಿತ್ರೀಕರಣ ಪ್ರಾರಂಭಿಸಿ, ಮೇ ತಿಂಗಳಲ್ಲಿ ಮುಗಿಸಿದ್ದಾರೆ. ಚಿತ್ರವು 2022ರ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಅದಕ್ಕೂ ಎರಡು ತಿಂಗಳ ಮುಂಚೆಯೇ, ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.

ಅಣ್ಣಾತ್ತೆ ಚಿತ್ರವನ್ನು ಸನ್​ ಪಿಕ್ಚರ್ಸ್​ ನಿರ್ಮಿಸುತ್ತಿದ್ದು, ಶಿವ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಜನಿಕಾಂತ್​, ನಯನತಾರಾ, ಕೀರ್ತಿ ಸುರೇಶ್​, ಮೀನಾ, ಖುಷ್ಬೂ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net