ಟಿಕ್​ಟಾಕ್​ ಸ್ಟಾರ್​ ಆದ ಹರ್ಷಿಕಾ

Harshika
Published on

ಹರ್ಷಿಕಾ ಪೂಣಚ್ಚ ದಣದ ಸಿನಿಮಾಗಳ ಜತೆಗೆ ಉತ್ತರದ ಭೋಜಪುರಿ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದು ಈಗಾಗಲೇ ಗೊತ್ತಿರುವ ವಿಚಾರ. ಇದೀಗ ಅದೇ ಚಿತ್ರರಂಗದಿಂದ ಹರ್ಷಿಕಾಗೆ ಮತ್ತೊಮ್ಮೆ ಬುಲಾವ್​ ಬಂದಿದೆ. ಅಷ್ಟೇ ಅಲ್ಲ, ಒಂದು ಸಿನಿಮಾವನ್ನೂ ಒಪ್ಪಿಕೊಂಡು ಅದರ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರವರು. ಆ ಚಿತ್ರದ ಹೆಸರು "ಸಜನ್​ ರೇ ಜೂಟ್​ ಮತ್​ ಬೊಲೋ'. ಪ್ರೇಮಾಂಶು ಸಿಂಗ್​ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಪ್ರದಿಪ್​ ಪಾಂಡೆ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಹರ್ಷಿಕಾ ಜೋಡಿಯಾಗಿದ್ದಾರೆ.

ರೊಮ್ಯಾಂಟಿಕ್​ ಕಾಮಿಡಿ ಶೈಲಿಯ ಈ ಚಿತ್ರದ ಬಗ್ಗೆ ಮಾಹಿತಿ ನೀಡುವ ಹರ್ಷಿಕಾ, "ಭೋಜಪುರಿಯಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು ಸಿಗುತ್ತಿವೆ. ಈ ಚಿತ್ರದಲ್ಲಿ ಸೋಷಿಯಲ್​ ಮೀಡಿಯಾ ಸ್ಟಾರ್​ ಪಾತ್ರ ಮಾಡುತ್ತಿದ್ದೇನೆ. ನಾಯಕನದ್ದು ಇಲ್ಲಿ ಬರೀ ಸುಳ್ಳು ಹೇಳುವ ಪಾತ್ರ. ಈಗಾಗಲೇ ಸೊಲ್ಲಾಪುರದಲ್ಲಿ 15 ದಿನದ ಶೂಟಿಂಗ್​ ಮುಗಿದಿದೆ. ಸದ್ಯ ಹೈದರಾಬಾದ್​ನಲ್ಲಿ ಶೂಟಿಂಗ್​ ನಡೆಯುತ್ತಿದೆ. ಬಳಿಕ ಗುಜರಾತ್​ಗೆ ತೆರಳಲಿದ್ದೇವೆ' ಎನ್ನುತ್ತಾರೆ.

"ಸಜನ್​ ರೇ ಜೂಟ್​ ಮತ್​ ಬೋಲೋ' ಚಿತ್ರವನ್ನು ನಾಸಿರ್​ ಜಮಾಲ್​ ನಿರ್ಮಾಣ ಮಾಡುತ್ತಿದ್ದಾರೆ. ಸರ್ರಾಜ್​ ಅವರಿಗೆ ಛಾಯಾಗ್ರಹಣದ ಜವಾಬ್ದಾರಿ. ಸದ್ಯ ಹರ್ಷಿಕಾ ಮತ್ತು ಪವನ್​ ಸಿಂಗ್​ ನಟನೆಯ "ಹಮ್​ ಹೈ ರಾಹಿ ಪ್ಯಾರ್​ ಕೆ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಸಿಕ್ಕ ಮೇಲೆ ರಿಲೀಸ್​ ಮಾಡಲು ತಂಡ ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net