ಶೆಫ್​ ಚಿದಂಬರನ ಅಡುಗೆ ಪೂರ್ಣ! ಪ್ಯಾಕಪ್ ಆಯಿತು ಅನಿರುದ್ಧ್, ನಿಧಿ ಸುಬ್ಬಯ್ಯ, ರೇಚೆಲ್ ಸಿನಿಮಾ

Chef Chidambara_(235)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ರಾಘು’ ಚಿತ್ರದ ಬಳಿಕ ನಿರ್ದೇಶಕ ಆನಂದ್ ರಾಜ್ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಶೆಫ್​ ಚಿದಂಬರ’. ಈ ಚಿತ್ರದ ಮೂಲಕ ನಟ ಅನಿರುದ್ಧ್ ಜತ್ಕರ್, ಐದು ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಚಿತ್ರದಲ್ಲಿ ಅವರಿಗೆ ಇಬ್ಬರು ನಾಯಕಿಯರಿದ್ದು ನಿಧಿ ಸುಬ್ಬಯ್ಯ ಮತ್ತು ರೇಚೆಲ್ ಡೇವಿಡ್ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ.

ನಿರ್ದೇಶಕ ಆನಂದ್ ರಾಜ್, ‘ಆ.10ರಿಂದ ಶೂಟಿಂಗ್ ಆರಂಭವಾಗಿ ಅ.10ಕ್ಕೆ ಪೂರ್ಣಗೊಂಡಿದೆ. ಈ ಸಮಯದಲ್ಲಿ 29 ದಿನಗಳ ಕಾಲ ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಸೇರಿ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ. ಇದೊಂದು ಡಾರ್ಕ್​ ಹ್ಯೂಮರ್ ಆ್ಯಕ್ಷನ್ ಥ್ರಿಲ್ಲರ್ ಜಾನರ್ ಕಥೆ’ ಎಂದು ಮಾಹಿತಿ ನೀಡಿದರು. ಶೆಫ್​ ಪಾತ್ರದಲ್ಲಿ ಮೊದಲ ಬಾರಿಗೆ ಅನಿರುದ್ಧ್ ನಟಿಸಿದ್ದು, ‘ನಾನು ಯಾವತ್ತೂ ಅಡುಗೆಮನೆ ಕಡೆ ಹೋದವನಲ್ಲ. ತರಬೇತಿ ಪಡೆದು ಶೆಫ್​ ಪಾತ್ರ ಮಾಡಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥೆಯಾದರೂ ಆನಂದ್ ರಾಜ್ ಹಾಸ್ಯದ ಮೂಲಕ ಹೇಳಿದ್ದಾರೆ’ ಎಂದರು.

ನಿಧಿ ಸುಬ್ಬಯ್ಯ, ‘ನಾನು ಇದುವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ರೋಲ್ ಎಲ್ಲರಿಗೂ ಇಷ್ಟವಾಗುವ ಭರವಸೆಯಿದೆ’ ಎಂದು ಹೇಳಿಕೊಂಡರು. ಮತ್ತೊಬ್ಬ ನಾಯಕಿ ರೇಚೆಲ್, ‘ನನ್ನ ಪಾತ್ರ ಮತ್ತು ಕಥೆ ಎರಡೂ ಚೆನ್ನಾಗಿದೆ. ಅನು ಎಂಬ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು. ಜತೆಗೆ ಶರತ್ ಲೋಹಿತಾಶ್ವ, ಶಿವಮಣಿ, ಮಹಾಂತೇಶ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಉದಯ್ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳೀಧರ್ ಸಂಗೀತವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net