ನಾನು ಅರೆಬರೆ ಬಟ್ಟೆ ಧರಿಸಿದ ಮಾತ್ರಕ್ಕೆ.... ಖ್ಯಾತ ನಟಿ ಅನಸೂಯಾ ಭಾರದ್ವಾಜ್ ಟ್ವೀಟ್​ ವೈರಲ್​! Anasuya Bharadwaj

Anasuya Bharadwaj
Published on

Anasuya Bharadwaj : ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯಾ ಭಾರದ್ವಾಜ್ ಬಗ್ಗೆ ಬಹುತೇಕರಿಗೆ ತಿಳಿದೇ ಇರುತ್ತದೆ. ನ್ಯೂಸ್ ರೀಡರ್ ಆಗಿ ವೃತ್ತಿ ಜೀವನ ಆರಂಭಿಸಿದ ಅನಸೂಯಾ ನಂತರ ಆ್ಯಂಕರ್ ಆಗಿ, ನಾಯಕಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ಮೂಲಕ ಸೆಲೆಬ್ರಿಟಿಯಾದರು. ಅದರಲ್ಲೂ ತಮ್ಮ ಸೌಂದರ್ಯ ಮತ್ತು ಅಭಿನಯದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆದಿದ್ದಾರೆ. ಆದರೆ, ಅನಸೂಯಾ ಅವರಿಗೆ ವಿವಾದಗಳು ಹೊರತಲ್ಲ. ಅದರಲ್ಲೂ ತನ್ನ ಹಾಟ್​ ಡ್ರೆಸ್‌ಗಳಿಂದಲೇ ಆಗಾಗ ಟ್ರೋಲ್‌ಗೆ ಒಳಗಾಗುತ್ತಕೇ ಇರುತ್ತಾರೆ. ಆದರೆ, ಇದ್ಯಾವುದಕ್ಕೂ ಅವರು ಕ್ಯಾರೆ ಎನ್ನುವುದಿಲ್ಲ.

ತಾಜಾ ಸಂಗತಿ ಏನೆಂದರೆ, ಅನಸೂಯಾ ಇತ್ತೀಚೆಗೆ ಮಾಡಿದ ಟ್ವೀಟ್ ಒಂದು ವೈರಲ್ ಆಗಿದೆ. ಅದೇನೆಂದರೆ, ಇತರರು ನನ್ನ ಬಗ್ಗೆ ಯಾವುದೇ ಕಾಮೆಂಟ್‌ಗಳನ್ನು ಮಾಡಿದಾಗ ನಾನು ಮೌನವಾಗಿರುತ್ತೇನೆ. ಆದರೆ, ನನ್ನ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್‌ಗಳನ್ನು ಮಾಡಿದರೆ, ನಾನು ಕೋಪ ಮಾಡಿಕೊಳ್ಳದೇ ಸ್ಪಷ್ಟವಾಗಿ ಮಾತನಾಡುತ್ತೇನೆ. ಇತ್ತೀಚೆಗೆ, ಕೆಲವು ಸಾಮಾಜಿಕ ಜಾಲತಾಣ ಚಾನೆಲ್‌ಗಳು ನನ್ನನ್ನು ಗುರಿಯಾಗಿಸಿಕೊಂಡಿದ್ದು, ಕೆಲ ಮಹಿಳಾ ಭಾಷಣಕಾರರು ಕೂಡ ನನ್ನನ್ನು ಟೀಕಿಸುತ್ತಿದ್ದಾರೆ. ಆದರೆ, ಅವರು ಯಾರೆಂದು ನನಗೆ ತಿಳಿದಿಲ್ಲ. ಅವರಿಗೂ ನನ್ನ ಬಗ್ಗೆ ತಿಳಿದಿಲ್ಲ. ಆದರೆ ಅವರು ನನ್ನ ಬಗ್ಗೆ ವೈಯಕ್ತಿಕವಾಗಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಅನಸೂಯಾ ಅಸಮಧಾನ ಹೊರಹಾಕಿದ್ದಾರೆ.

ನಾನೊಬ್ಬಳು ತಾಯಿ ಮತ್ತು ಹೆಂಡತಿ ನಿಜ. ಆದರೆ, ನಾನು ಧರಿಸುವ ಬಟ್ಟೆಗಳು ನನ್ನ ವೈಯಕ್ತಿಕ. ಗ್ಲಾಮರ್ ಮತ್ತು ಶೈಲಿ ನನ್ನ ಗುರುತಿನ ಭಾಗವಾಗಿದೆ. ಕೆಲವರು ತಾಯಿಯಾಗಿರುವವರು ಹೀಗೆ ಇರಬಾರದು ಎಂದು ಹೇಳುತ್ತಾರೆ. ನಾವು ತಾಯಿಯಾದ ಮಾತ್ರಕ್ಕೆ ನಮ್ಮ ನಿಜವಾದ ಸ್ವಭಾವವನ್ನು ತ್ಯಜಿಸಬೇಕೇ? ನನ್ನ ಗಂಡ ಮತ್ತು ನನ್ನ ಮಕ್ಕಳೇ ನನ್ನನ್ನು ಬೆಂಬಲಿಸುತ್ತಾರೆ. ಅಷ್ಟೇ ಅಲ್ಲ ನನ್ನನ್ನು ಪ್ರೀತಿಸುತ್ತಾರೆ. ನನ್ನ ಮಕ್ಕಳು ಓರ್ವ ಧೈರ್ಯಶಾಲಿ ಮಹಿಳೆಯನ್ನು ನೋಡಿ ಬೆಳೆಯುತ್ತಿದ್ದಾರೆ. ಕೆಲವರು ಅಷ್ಟು ಮುಕ್ತರಲ್ಲದಿರಬಹುದು. ಅದು ನಿಮ್ಮ ಆಯ್ಕೆ. ಆದರೆ, ಯಾರೊಬ್ಬರ ಆಯ್ಕೆಯನ್ನು ನೆಗೆಟಿವ್​ ಆಗಿ ನೋಡಬೇಡಿ ಎಂದು ಹೇಳಿದ್ದಾರೆ.

ನಾನು ಇಷ್ಟಪಡುವ ಬಟ್ಟೆಗಳನ್ನು ಧರಿಸಿದರೆ ನಾನು ನನ್ನ ಮೌಲ್ಯಗಳನ್ನು ಕಳೆದುಕೊಂಡಿದ್ದೇನೆ ಎಂದರ್ಥವಲ್ಲ. ನನ್ನನ್ನು ಅನುಸರಿಸುವಂತೆಯೂ ನಾನು ಯಾರನ್ನೂ ಕೇಳುತ್ತಿಲ್ಲ. ಅದು ಅವರ ಆಯ್ಕೆ. ನಾನು ಇಷ್ಟಪಡುವ ರೀತಿಯಲ್ಲಿ ಬದುಕುತ್ತೇನೆ. ಇಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿದ್ದಾರೆ. ನಾನು ಯಾರನ್ನೂ ದೂಷಿಸುವುದಿಲ್ಲ. ನೀವು ಇತರರ ಜೀವನವನ್ನು ಸಹ ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಸೌಮ್ಯವಾಗಿಯೇ ಟೀಕಾಕಾರನಿಗೆ ಸಂದೇಶ ರವಾನಿಸಿದ್ದಾರೆ.

ಇಬ್ಬರು ಮಕ್ಕಳ ತಾಯಿಯಾಗಿರುವ ಅನಸೂಯಾ ಮಕ್ಕಳ ಮುಂದೆಯೇ ಅರೆಬೆತ್ತಲೆ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಟೀಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನಸೂಯಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಇಂತಹ ಟೀಕೆಗಳು ಅನಸೂಯಾ ಅವರಿಗೆ ಹೊಸದೇನಲ್ಲ. ಆದರೆ, ಈ ಬಾರಿ ಮಹಿಳೆಯರು ಕೂಡ ಅನಸೂಯಾ ಬಗ್ಗೆ ಮಾತನಾಡಿರುವುದರಿಂದ ತುಂಬಾ ಬೇಸರ ಮಾಡಿಕೊಂಡು ಈ ಮಾತುಗಳನ್ನಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net