

ಶುಕ್ರವಾರ ನಿಧನರಾದ ಬಾಲಿವುಡ್ನ ಜನಪ್ರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರ ಸಾವಿಗೆ, ಸೆಲೆಬ್ರಿಟಿಗಳೆಲ್ಲಾ ತಮ್ಮದೇ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಲೇ ಇದ್ದಾರೆ. ಇಂದು ಅಮೂಲ್ ಸಹ ಸರೋಜ್ ಖಾನ್ ಅವರಿಗೆ ಕಾರ್ಟೂನ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದೆ.
ಅಮೂಲ್ ಸಂಸ್ಥೆಯು ಬೆಣ್ಣೆಗೆ ಅದೆಷ್ಟು ಜನಪ್ರಿಯವೋ, ಅದೇ ರೀತಿ ಕಾರ್ಟೂನ್ಗಳಿಗೂ ಹೆಸರುವಾಸಿ ಎಂದು ಎಲ್ಲರಿಗೂ ಗೊತ್ತೇ ಇದೆ. ಪ್ರಸಕ್ತ ವಿದ್ಯಾಮನಗಳ ಕುರಿತಾಗಿ, ಅಮುಲ್ ಸಂಸ್ಥೆಯು ಆಗಾಗ ಕಾರ್ಟೂನ್ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಈಗ ಸರೋಜ್ ಖಾನ್ ಅವರ ನಿಧನಕ್ಕೆ ಕಾರ್ಟೂನ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದೆ.
ಅಮೂಲ್ ಸಂಸ್ಥೆಯ ಎಲ್ಲಾ ಕಾರ್ಟೂನ್ಗಳಲ್ಲೂ ಒಂದು ಮಗುವನ್ನು ನೋಡಬಹುದು. ಈ ಕಾರ್ಟೂನ್ನಲ್ಲಿ ಅಮುಲ್ ಬೇಬಿಯ ಜತೆಗೆ ಸರೋಜ್ ಖಾನ್ ಅವರು ನೃತ್ಯ ಮಾಡುತ್ತಿರುವ ಕ್ಯಾರಿಕೇಚರ್ ಬಿಡಿಸಲಾಗಿದೆ. 'ಫ್ರಮ್ ದಿ ಎ,ಬಿ,ಸಿ ಟು ಏಕ್, ದೋ, ತೀನ್ ಆಫ್ ಡ್ಯಾನ್ಸ್ ... ' ಎಂದು ಕಾರ್ಟೂನ್ನಲ್ಲಿ ಬರೆಯಲಾಗಿದೆ. ಸರೋಜ್ ಖಾನ್ ನೃತ್ಯ ನಿರ್ದೇಶನ ಮಾಡಿರುವ 'ತೇಜಾಬ್' ಚಿತ್ರದ 'ಏಕ್ ದೋ ತೀನ್ ...' ಹಾಡನ್ನು ಸ್ಫೂರ್ತಿಯಾಗಿಸಿಕೊಂಡು ಈ ಕಾರ್ಟೂನ್ ರಚಿಸಲಾಗಿದ್ದು, "ನೃತ್ಯದ ಮಾತೆಗೆ ಶ್ರದ್ಧಾಂಜಲಿ' ಎಂಬ ಕ್ಯಾಪ್ಶನ್ನಲ್ಲಿ, ಸೋಷಿಯಲ್ ಮೀಡಿಯಾದಲ್ಲೀ ಈ ಕಾರ್ಟೂನ್ ಪೋಸ್ಟ್ ಮಾಡಲಾಗಿದೆ.
ಚಿತ್ರರಂಗದ ಕುರಿತಾಗಿ ಅಮೂಲ್, ಕಾರ್ಟೂನ್ಗಳನ್ನು ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ, ಚಿತ್ರರಂಗದಲ್ಲಿ ಬೆಳವಣಿಗೆಗಳನ್ನು ಅಮೂಲ್ ಕಾರ್ಟೂನ್ಗಳ ಮೂಲಕ ಸೂಕ್ಷ್ಮವಾಗಿ ಸೆರೆಹಿಡಿಯಲಾಗಿತ್ತು. ಸುಶಾಂಗ್ ಸಿಂಗ್ ರಜಪೂತ್ ನಿಧನರಾದಾಗಲೂ ಇದೇ ರೀತಿ ಕಾರ್ಟೂನ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು.