ನಾನು ಏನೇ ಮಾಡಿದ್ರೂ ಬಾಕ್ಸ್​​-ಆಫೀಸ್​ ಹಿಟ್​ ಆಗಲ್ಲ ... ಆರ್ಶದ್​ ವಾರ್ಸಿ ಬೇಸರ

Arshad Final
Published on

ಕೆಲವು ಹೀರೋಗಳೇ ಹಾಗೆ. ಅವರು ಹಲವು ಸಿನಿಮಾಗಳಲ್ಲೇನೋ ನಟಿಸುತ್ತಲೇ ಇರುತ್ತಾರೆ. ಆದರೆ, ಅವರು ಆರಕ್ಕೇರುವುದಿಲ್ಲ, ಮೂರಕ್ಕಿಳಿಯುವುದಿಲ್ಲ. ಅವರೇನೋ ಪ್ರತಿಭಾವಂತರೆಂದು ಗುರುತಿಸಿಕೊಂಡಿರುತ್ತಾರೆ. ಆದರೆ, ಅವರ ಚಿತ್ರಗಳ್ಯಾವುವೂ ಬಾಕ್ಸ್​-ಆಫೀಸ್​ನಲ್ಲಿ ದೊಡ್ಡ ಸದ್ದು ಮಾಡುವುದಿಲ್ಲ. ಚಿತ್ರರಂಗ ಎಷ್ಟೇ ಆದರೂ, ದೊಡ್ಡ ಹಿಟ್​ಗಳನ್ನು ನಿರೀಕ್ಷೆ ಮಾಡುತ್ತದೆ. ಯಾವಾಗ ಒಬ್ಬ ನಟ ಅಥವಾ ನಟಿ ಆವರೇಜ್​ ಎನಿಸಿಕೊಳ್ಳುತ್ತಾರೋ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನೇ ಬಿಟ್ಟುಬಿಡುತ್ತದೆ.

ಅಂತಹ ಕಲಾವಿದರ ಪೈಕಿ ಅರ್ಶದ್​ ವಾರ್ಸಿ ಸಹ ಒಬ್ಬರು. ಅರ್ಶದ್​ ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ. ಇಷ್ಟು ಸಮಯದಲ್ಲಿ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಆ ಚಿತ್ರಗಳ ಪೈಕಿ ದೊಡ್ಡ ಹಿಟ್​ ಯಾವುದು ಎಂದರೆ ಉತ್ತರಿಸುವುದು ಕಷ್ಟ. ಏಕೆಂದರೆ, ಸೋಲೋ ಹೀರೋ ಆಗಿ ಅರ್ಷದ್​ ನಟಿಸಿದ ಚಿತ್ರಗಳೆಲ್ಲವೂ ಬಾಕ್ಸ್​-ಆಫೀಸ್​ನಲ್ಲಿ ಆವರೇಜ್​ ಎನಿಸಿಕೊಂಡ ಚಿತ್ರಗಳೇ. 'ಮುನ್ನಾಭಾಯ್​ ಎಂಬಿಬಿಎಸ್​' ಮತ್ತು 'ಲಗೇರಹೋ ಮುನ್ನಾಭಾಯ್​' ಚಿತ್ರಗಳನ್ನು ಹೊರತುಪಡಿಸಿದರೆ, ಬೇರೆ ಹೀರೋಗಳ ಜತೆಗೆ ಅರ್ಶದ್​ ನಟಿಸಿರುವ ಚಿತ್ರಗಳು ಸಹ ಬಾಕ್ಸ್​-ಆಫೀಸ್​ನಲ್ಲಿ ದೊಡ್ಡ ಜಾದೂ ಮಾಡಿಲ್ಲ ಎನ್ನುವುದು ನಿಜ.

ಈಗ್ಯಾಕೆ ಈ ವಿಷಯವೆಂದರೆ, ಅರ್ಶದ್​ ಅಭಿನಯದ 'ಗುಡ್ಡು ರಂಗೀಲಾ' ಎಂಬ ಚಿತ್ರ ಬಿಡುಗಡೆಯಾಗಿ ಐದು ವರ್ಷಗಳಾಗಿವೆ. 2015ರ ಜುಲೈ 3ರಂದು ಬಿಡುಗಡೆಯಾದ ಈ ಚಿತ್ರವು, ಬಾಕ್ಸ್​-ಆಫೀಸ್​ನಲ್ಲಿ ಆವರೇಜ್​ ಎಂದನಿಸಿಕೊಂಡಿತ್ತು. ಈ ಚಿತ್ರ ಐದು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಾಲಿವುಡ್​ ಪಂಡಿತರೊಬ್ಬರು, ಈ ಚಿತ್ರದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಚಿತ್ರಕ್ಕೆ ಸಿಗಬೇಕಾಗಿದ್ದ ಮಾನ್ಯತೆ ಸಿಗಲಿಲ್ಲ ಎಂದು ಬೇಸರಿಸಿಕೊಂಡಿದ್ದರು.

ಇದು ನಿಜ ಎಂದು ಉತ್ತರಿಸಿರುವ ಅರ್ಶದ್​ ವಾರ್ಸಿ, 'ಈ ಆಕ್ಷನ್​-ಕಾಮಿಡಿಗೆ ಜನರಿಗೆ ಸಿಗಬೇಕಾಗಿದ್ದ ಮಾನ್ಯತೆ ಸಿಗಲಿಲ್ಲ. ಈ ಚಿತ್ರವಾದರೂ ಬಾಕ್ಸ್​-ಆಫೀಸ್​ನಲ್ಲಿ ಸ್ವಲ್ಪ ಸದ್ದು ಮಾಡಬಹದು ಎಂದುಕೊಂಡಿದ್ದೆ. ಆದರೆ, ಅದು ನಿಜವಾಗಲಿಲ್ಲ. ಅದೇನೋ ಗೊತ್ತಿಲ್ಲ. ನಾನು ಏನೇ ಮಾಡಿದರೂ, ಬಾಕ್ಸ್​ ಆಫೀಸ್​ ಹಿಟ್​ ಆಗುವುದಿಲ್ಲ' ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

ಅಮಿತಾಭ್​ ಬಚ್ಚನ್​ ನಿರ್ಮಾಣದ 'ತೇರೇ ಮೇರೇ ಸಪ್ನೇ' ಚಿತ್ರದ ಮೂಲಕ ಬಾಲಿವುಡ್​ಗೆ ಹೀರೋ ಆಗಿ ಬಂದವರು ಅರ್ಶದ್​. ಆದರೆ, ಅಲ್ಲಿಂದ ಇಲ್ಲಿಯವರೆಗೂ ಸೈಕಲ್​ ಹೊಡೆಯುತ್ತಲೇ ಇರುವುದು ಮಾತ್ರ ಬೇಸರದ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net