ಆಸ್ಟ್ರಿಯಾ ಚಿತ್ರೋತ್ಸವಕ್ಕೆ ಅಮೃತಮತಿ

Amruthamathi
Published on

ಬೆಂಗಳೂರು: ಕರೊನಾದಿಂದಾಗಿ ಜಗತ್ತಿನಾದ್ಯಂತ ಬಹುತೇಕ ಚಿತ್ರೋತ್ಸವಗಳು ರದ್ದಾಗಿವೆ. ಕೆಲವು ಚಿತ್ರೋತ್ಸವಗಳನ್ನು ಆನ್​ಲೈನ್ ಮೂಲಕ ಮಾಡಲು ತೀರ್ವನಿಸಲಾಗಿದೆ. ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನೂ ಆನ್​ಲೈನ್ ಮೂಲಕ ನಡೆಸಲು ತೀರ್ವನಿಸಲಾಗಿದ್ದು, ಈ ಚಿತ್ರೋತ್ಸವಕ್ಕೆ ಇದೀಗ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಆಯ್ಕೆಯಾಗಿದೆ.

‘ಅಮೃತಮತಿ’ ಚಿತ್ರವು ಈ ಹಿಂದೆ ನೋಯ್ಡಾ ವಿಶ್ವ ಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದು, ಈ ಚಿತ್ರೋತ್ಸವದಲ್ಲಿ ನಟಿ ಹರಿಪ್ರಿಯಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿತ್ತು. ಇದೀಗ, ಚಿತ್ರವು ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾಕಣಕ್ಕೆ ಆಯ್ಕೆಯಾಗಿದ್ದು, ಈ ಚಿತ್ರೋತ್ಸವವು ಜುಲೈ 22ರಿಂದ ಆಗಸ್ಟ್ 5ರವರೆಗೂ ನಡೆಯಲಿದೆ. ಆ ನಂತರ ವಿಶೇಷ ಸಮಾರಂಭವನ್ನು ಆಯೋಜಿಸಿ, ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

‘ಅಮೃತಮತಿ’ ಚಿತ್ರವು ‘ಯಶೋಧರ ಚರಿತೆ’ ಕಾವ್ಯವನ್ನಾಧರಿಸಿದೆ. ಮೂಲ ಕಥಾವಸ್ತುವನ್ನು ಮರುವ್ಯಾಖ್ಯಾನ ಮಾಡಿ ಮರುಸೃಷ್ಟಿ ಮಾಡಲಾಗಿದೆ. ಚಿತ್ರದಲ್ಲಿ ಅಮೃತಮತಿ ಪಾತ್ರವನ್ನು ಹರಿಪ್ರಿಯಾ ಮಾಡಿದರೆ, ಯಶೋಧರನ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಸುಂದರ್​ರಾಜ್, ಪ್ರಮೀಳಾ ಜೋಷಾಯ್, ವತ್ಸಲಾ ಮೋಹನ್, ತಿಲಕ್, ಸುಪ್ರಿಯಾ ರಾವ್ ಮುಂತಾದವರು ನಟಿಸಿದ್ದಾರೆ. ಶಮಿತಾ ಮಲ್ನಾಡ್ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net