ಅಮಿತಾಭ್ ಮೊಮ್ಮಗ ಸಹ ಬಾಲಿವುಡ್ಗೆ ಎಂಟ್ರಿ ಕೊಡ್ತಾನಾ?

Final - Agastya
Published on

ಅಮಿತಾಭ್ ಬಚ್ಚನ್ ಅವರ ಮನೆಯಲ್ಲಿ ಈಗಾಗಲೇ ನಾಲ್ಕು ಕಲಾವಿದರಿದ್ದಾರೆ. ಇದರ ಜತೆಗೆ, ಈ ಕುಟುಂಬದ ಇನ್ನೊಂದು ಕುಡಿ ಇದೀಗ ಬಾಲಿವುಡ್‍ಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಇಷ್ಟಕ್ಕೂ ಈ ಕುಡಿ ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಬೇರೆ ಯಾರೂ ಅಲ್ಲ, ಶ್ವೇತಾ ಬಚ್ಚನ್ ಅವರ ಮಗ ಅಗಸ್ತ್ಯ ನಂದಾ.

ಅಗಸ್ತ್ಯನಿಗೆ ಈಗ 19ರ ಹರೆಯ. ತೆಳ್ಳಗೆ ಉದ್ದಗೆ ಬೆಳೆದಿರುವ ಅಗಸ್ತ್ಯ, ಇತ್ತೀಚೆಗೆ ತಾತನ ಜತೆಗೆ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ದೃಶ್ಯಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಅಗಸ್ತ್ಯ ಸಹ ತನ್ನ ತಾತ ಮತ್ತು ಮಾವನ ತರಹ ಬಾಲಿವುಡ್‍ನಲ್ಲಿ ನಟನಾಗಿ ಗುರುತಿಸಿಕೊಳ್ಳುತ್ತಾರಾ ಎಂಬ ಚರ್ಚೆ ಇದೀಗ ಬಾಲಿವುಡ್ ಅಂಗಳದಲ್ಲಿ ಹೆಚ್ಚಾಗುತ್ತಿದೆ.

ಅಗಸ್ತ್ಯ ಬಾಲಿವುಡ್‍ಗೆ ಇನ್ನೂ ಬರದಿರಬಹುದು. ಆದರೆ, ಈಗಲೇ ಆ ಹುಡುಗನಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಈ ಅಭಿಮಾನಿ ಬಳಗವನ್ನು ನೋಡಿರುವ ಕೆಲವು ನಿರ್ಮಾಪಕರು, ಈಗಾಗಲೇ ಅಗಸ್ತ್ಯನನ್ನು ಹೀರೋ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರಂತೆ. ಆದರೆ, ಸದ್ಯಕ್ಕೆ ಅಗಸ್ತ್ಯ ಇನ್ನೂ ಓದಿ ಮುಗಿಸಿಲ್ಲ. ಮುಂದೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ, ಅದಕ್ಕೆ ಇನ್ನಷ್ಟು ಸಮಯವಿದೆ. ಇನ್ನೂ ನಾಲ್ಕೈದು ವರ್ಷಗಗಳ ನಂತರ ಅಗಸ್ತ್ಯ ಹೀರೋ ಆಗಬಹುದು ಎಂದು ಹೇಳಲಾಗುತ್ತಿದೆ.

ಅಗಸ್ತ್ಯಗೆ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಆದರೆ, ಅವರ ತಾಯಿ ಶ್ವೇತಾ ಬಚ್ಚನ್‍ಗೆ ಮಾತ್ರ, ಮಗ ಹೀರೋ ಆಗುವುದರ ಬಗ್ಗೆ ಅಷ್ಟೇನೂ ಆಸಕ್ತಿ ಇದ್ದ ಹಾಗಿಲ್ಲ. ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾತನಾಡಿದ ಶ್ವೇತಾ, ತಮ್ಮ ಮಗ ಚಿತ್ರರಂಗಕ್ಕೆ ಬರುವ ಬಗ್ಗೆ ಅಷ್ಟೇನೂ ಒಲವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣವೂ ಇದೆ. ತಮ್ಮ ಸಹೋದರ ಅಭಿಷೇಕ್ ಬಚ್ಚನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುವ ಟೀಕೆ ಟಿಪ್ಪಣಿಗಳನ್ನು ನೋಡಿ, ರೋಸಿ ಹೋಗಿರುವ ಅವರು, ತಮ್ಮ ಮಗ ಸಹ ಅದನ್ನೆಲ್ಲಾ ಅನುಭವಿಸಬಾರದು ಎಂಬ ಅಭಿಪ್ರಾಯಕ್ಕೆ ಬಂದ್ದಿದ್ದಾರೆ.

ಅದೇ ಕಾರಣಕ್ಕೆ ಶ್ವೇತಾ ಅವರಿಗೆ ತಮ್ಮ ಮಗ ಹೀರೋ ಆಗುವ ಬಗ್ಗೆ ಅಷ್ಟೇನೂ ಒಲವಿಲ್ಲ. ಆದರೆ, ಅಗಸ್ತ್ಯ ಹಣೆಯಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net