ಅಳು ತಡೆಯೋಕೆ ಆಗ್ತಿಲ್ಲವಂತೆ 'ಬಿಗ್​ ಬಿ'ಗೆ ...

Aishwarya Rai and Aradhya - Final
Published on

ಕರೊನಾದಿಂದ ಕಳೆದ ವಾರ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ನಟಿ ಐಶ್ವರ್ಯಾ ರೈ ಬಚ್ಚನ್​ ಮತ್ತು ಅವರ ಪುತ್ರಿ ಆರಾಧ್ಯಾ, ಗುಣಮುಖರಾಗಿ ಸೋಮವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈ ಕುರಿತು ಐಶ್ವಯಾ ರೈ ಅವರ ಪತಿ ಅಭಿಷೇಕ್​ ಬಚ್ಚನ್​ ಟ್ವೀಟ್​ ಮಾಡಿ, ಎಲ್ಲರ ಶುಭ ಹಾರೈಕೆಗಳೊಂದಿಗೆ ಅವರಿಬ್ಬರೂ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಇದೀಗ ಅಮಿತಾಭ್​ ಬಚ್ಚನ್​ ಸಹ ಟ್ವೀಟ್​ ಮಾಡಿದ್ದಾರೆ. ತಮ್ಮ ಸೊಸೆ ಮತ್ತು ಮೊಮ್ಮಗಳು ಸುರಕ್ಷಿತವಾಗಿ ಆಸ್ಪತ್ರೆಯಿಂದ ಮನೆಗೆ ಮರಳಿ ಬಂದಿರುವುದು ಖುಷಿ ತಂದಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಅವರು ಸರುಕ್ಷಿತವಾಗಿರುವ ವಿಷಯ ಕೇಳಿ, ಸಂತೋಷದಿಂದ ಅಳು ತಡೆಯೋಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಬರೆದಿರುವ ಅವರು, 'ನಮ್ಮ ಚೋಟಿ ಬಿಟಿಯಾ ಮತ್ತು ಬಹುರಾನಿಗೆ ಆಸ್ಪತ್ರೆಯಿಂದ ಮುಕ್ತಿ ಸಿಕ್ಕಿದೆ. ಈ ವಿಷಯ ಕೇಳಿ ಸಂತೋಷದಿಂದ ಅಳು ತಡೆಯೋಕೆ ಆಗ್ತಿಲ್ಲ. ಪ್ರಭು ನಿನ್ನ ಕೃಪೆ ಅಪಾರ' ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಸುಮಾರು ಎರಡು ವಾರಗಳ ಹಿಂದೆ, ಅಮಿತಾಭ್​ ಬಚ್ಚನ್​ ಮತ್ತು ಅವರ ಮಗ ಅಭಿಷೇಕ್​ ಬಚ್ಚನ್​ ಕೋವಿಡ್​ ಪರೀಕ್ಷೆಗೆ ಒಳಗಾದಾಗ, ವರದಿ ಪಾಸಿಟಿವ್​ ಬಂದು ಇಬ್ಬರೂ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಐಶ್ವರ್ಯಾ ಮತ್ತು ಆರಾಧ್ಯಾಗೆ ಟೆಸ್ಟ್​ ಮಾಡಿದ್ದಾಗ, ಇಬ್ಬರಿಗೂ ಕರೊನಾ ಪಾಸಿಟಿವ್​ ಪತ್ತೆಯಾಗಿತ್ತು. ಈ ಸಂಬಂಧ ಅವರಿಬ್ಬರಿಗೂ ಹೋಂ ಕ್ವಾರಂಟೈನ್​ನಲ್ಲಿ ಚಿಕಿತ್ಸೆ ನೀಡಲಾಗುತಿತ್ತು.

ಹತ್ತು ದಿನಗಳ ಹಿಂದೆ ಐಶ್ವರ್ಯಾ ಮತ್ತು ಆರಾಧ್ಯಗೆ ಪರೀಕ್ಷೆ ಮಾಡಿದಾಗ, ಮತ್ತೊಮ್ಮೆ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ನಾನಾವತಿ ಆಸ್ಪತ್ರೆಗೆ ದಾಖಲಾಗಿತ್ತು. ಈಗ ಅವರಿಬ್ಬರೂ ಸಂಪೂರ್ಣವಾಗಿ ಗುಣಮುಖರಾಗಿರುವ ಕಾರಣ, ಇಬ್ಬರನ್ನೂ ಡಿಸ್ಚಾರ್ಜ್​ ಮಾಡಲಾಗಿದೆ. ಆದರೆ, ಅವರಿಗಿಂತ ಮುನ್ನ ಆಸ್ಪತ್ರೆಗೆ ದಾಖಲಾಗಿರುವ ಅಮಿತಾಭ್​ ಮತ್ತು ಅಭಿಷೇಕ್​ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯದಲ್ಲೇ ಡಿಸ್ಚಾರ್ಜ್​ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net