

ಕಳೆದ 15 ದಿನಗಳ ಕಾಲ ಕರೊನಾ ವಿರುದ್ಧ ಸೆಣಸಾಡಿ, ಈಗಷ್ಟೇ ಮನೆ ಸೇರಿದ್ದಾರೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್. ಅವರ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥಿಸಿತ್ತು. ಇತ್ತ ಕ್ಯಾಚಿ ಕಾರ್ಟೂನ್ ಮೂಲಕವೇ ಸುದ್ದಿ ಮಾಡುವ ಖ್ಯಾತ ಅಮೂಲ್ ಸಂಸ್ಥೆ, ಅಮಿತಾಬ್ ಡಿಸ್ಚಾರ್ಜ್ ಆದ ಖುಷಿಯನ್ನು ವಿಶೇಷ ಕಾರ್ಟೂನ್ ಮೂಲಕ ಹಂಚಿಕೊಂಡಿತ್ತು. ಆ ಫೋಟೋವನ್ನು ಸ್ವತಃ ಬಿಗ್ ಬಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಅವರ ಕಾಳಜಿಗೆ ಧನ್ಯವಾದ ಅರ್ಪಿಸಿದ್ದರು. ಇದೀಗ ಆ ಪೋಸ್ಟರ್ ಟ್ರೋಲ್ಗೆ ಗುರಿಯಾಗಿದೆ.
‘ಕಳೆದ ಹಲವು ವರ್ಷಗಳಿಂದ ಅಮೂಲ್ ಕಡೆಯಿಂದ ತುಂಬ ಗೌರವ ಪ್ರಾಪ್ತವಾಗಿದೆ. ಸಾಮಾನ್ಯನಿಗೆ ಇದು ಪ್ರೈಸ್ಲೆಸ್’ ಎಂದು ಟ್ವಿಟ್ ಮಾಡಿದ್ದಾರೆ. ಹೀಗೆ ಹೇಳಿಕೊಂಡಿದ್ದೇ ತಡ, ಒಂದಷ್ಟು ಮಂದಿ ಅಮಿತಾಬ್ ವಿರುದ್ಧ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ‘ಈ ರೀತಿಯ ನಿಮ್ಮನ್ನು ತೋರಿಸಲು, ಅಮೂಲ್ ಕಡೆಯಿಂದ ಪ್ರತಿ ವರ್ಷ ನಿಮಗೂ ಮೊತ್ತ ಸಿಗುತ್ತಿದೆ. ಅದಕ್ಕೆ ಇಬ್ಬರೂ ಬೆಳೆಯುತ್ತಿದ್ದೀರಿ’ ಎಂದಿದ್ದಾರೆ.
ಹೀಗೆ ಹೇಳಿದ್ದೇ ತಡ ಬಚ್ಚನ್ ಕೊಂಚ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ‘ಯಾವುದನ್ನೂ ತಿಳಿದುಕೊಳ್ಳದೇ ಈ ರೀತಿ ಮಾತನಾಡುವುದು ತಪ್ಪು. ಏನು ಮಾತನಾಡುತ್ತಿದ್ದೇನೆ ಎಂಬುದನ್ನು ಅರಿತು ಮಾತನಾಡಿ. ನಾನು ಅಮೂಲ್ ಪ್ರಾಡಕ್ಟ್ ಬಗ್ಗೆ ಇಲ್ಲಿಯವರೆಗೂ ಎಲ್ಲಿಯೂ ಮಾತನಾಡಿಲ್ಲ. ಪ್ರಚಾರವನ್ನೂ ಮಾಡಿಲ್ಲ. ಬಾಣ ಬಿಡುವ ಮುನ್ನ ವಿಚಾರ ಮಾಡಬೇಕು. ಚೂರು ಹೆಚ್ಚು ಕಡಿಮೆ ಆದರೂ ಅದು ನಮ್ಮ ಮೇಲೆಯೇ ದಾಳಿ ಮಾಡಬಹುದು. ಈಗ ಆಗಿದ್ದೂ ಅದೇ’ ಎಂದು ಖಡಕ್ ಉತ್ತರ ನೀಡಿದ್ದಾರೆ. (ಏಜೆನ್ಸೀಸ್)