ಹುಟ್ಟುಹಬ್ಬ ದಿನದಂದು ರೆಬೆಲ್ ಸ್ಟಾರ್ ನೆನಪುಗಳು: ಉಳಿದವರು ಕಂಡಂತೆ...

Ambi Doddanna
Published on

ಇಂದು (ಶುಕ್ರವಾರ) ಅಂಬರೀಷ್ ಅವರ 69ನೇ ಹುಟ್ಟುಹಬ್ಬ. ಅವರಿಲ್ಲದ ಎರಡನೆಯ ಹುಟ್ಟುಹಬ್ಬ. ಅಂಬರೀಷ್ ಅಗಲಿಕೆಯ ಈ ಒಂದೂವರೆ ವರ್ಷಗಳಲ್ಲಿ ಅವರನ್ನು ಕನ್ನಡಿಗರು ನೆನಪಿಸಿಕೊಳ್ಳದ ದಿನಗಳೇ ಇಲ್ಲ. ಅದರಲ್ಲೂ ಈ ಸಂದರ್ಭದಲ್ಲಿ ಅವರು ಸ್ವಲ್ಪ ಜಾಸ್ತಿಯೇ ನೆನಪಾಗುತ್ತಿದ್ದಾರೆ. ಬಹುಶಃ ಈ ಲಾಕ್​ಡೌನ್ ಸಮಯದಲ್ಲಿ ಅವರು ಇದ್ದಿದ್ದರೆ, ಕಾರ್ವಿುಕರು ಮತ್ತು ತಂತ್ರಜ್ಞರು ಇಷ್ಟೊಂದು ಸಮಸ್ಯೆ ಎದುರಿಸಬೇಕಾಗಿರಲಿಲ್ಲವೇನೋ? ತಮ್ಮ ಶಕ್ತಿ ಬಳಸಿ ಕಷ್ಟದಲ್ಲಿ ಇರುವವರು, ಸ್ವಲ್ಪ ನೆಮ್ಮದಿ ಆಗಿರುವಂತೆ ನೋಡಿಕೊಳ್ಳುತ್ತಿದ್ದರೇನೋ? ಬರೀ ಇದೊಂದೇ ಕಾರಣಕ್ಕೆ ಅಲ್ಲ, ಅಂಬರೀಷ್ ಅವರು ತಮ್ಮ ಮಾತು, ಗುಣ, ವ್ಯಕ್ತಿತ್ವ, ಸ್ನೇಹಪರತೆ, ಚಿತ್ರಗಳು, ಅಭಿನಯ... ಹೀಗೆ ಹಲವು ವಿಷಯಗಳಿಂದ ಸುದ್ದಿಯಾಗಿದ್ದವರು. ಅವರ ಈ ಹುಟ್ಟುಹಬ್ಬದ ನೆನಪಲ್ಲಿ, ಕನ್ನಡ ಚಿತ್ರರಂಗದ ಹಲವು ಗಣ್ಯರು, ಅಂಬರೀಷ್ ಅವರನ್ನು ಬೇರೆಬೇರೆ ಕಾರಣಕ್ಕೆ ನೆನಪಿಸಿಕೊಂಡಿದ್ದಾರೆ.

ತುಂಬ ಮಿಸ್ ಮಾಡ್ಕೊಳ್ತಿದ್ದೀವಿ

ಅಂಬರೀಷ್ ಇಲ್ಲದಿರುವುದು ಈಗ ಗೊತ್ತಾಗುತ್ತಿದೆ. ಒಬ್ಬ ಸ್ನೇಹಿತನಾಗಿ, ಲೀಡರ್ ಆಗಿ, ಕುಟುಂಬದ ಸದಸ್ಯನಾಗಿ ಆತನನ್ನು ನಾನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಚಿರಂಜೀವಿ ಮನೆಯಲ್ಲಿ ತೆಲುಗು ಚಿತ್ರರಂಗ ಸೇರಿತ್ತು. ಲಾಕ್​ಡೌನ್​ನಿಂದ ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ಮಾಡಿತ್ತು. ಅಂಬರೀಷ್ ಇದ್ದಿದ್ದರೆ, ಇಲ್ಲೂ ಅದೇ ರೀತಿ ಆಗಿರುತಿತ್ತು. ಇಷ್ಟರಲ್ಲಿ ಸರ್ಕಾರದ ಜತೆಗೆ ಮಾತಾಡಿ, ಅಗತ್ಯ ಇರುವವರಿಗೆ ಒಂದಿಷ್ಟು ಸಹಾಯ ಮಾಡಿಸುತ್ತಿದ್ದ. ಅವನಿಗೆ ಕಮ್ಯಾಂಡ್ ಇತ್ತು. ಈಗ ಅವೆಲ್ಲ ಮಿಸ್ ಆಗುತ್ತಿದೆ. ಮಿಸ್ ಎನ್ನುವುದಕ್ಕಿಂತ ಅಂಬರೀಷ್ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗಿದೆ.

| ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹಿರಿಯ ನಿರ್ದೇಶಕ

ಬೊಗಸೆ ಕೊಟ್ಟಂತಾಗುತಿತ್ತು

ಅಂಬಿ ಇಲ್ಲ ಅಂತ ನನಗೆ ಅನಿಸಿಲ.. ಅವರು ಯಾವಾಗಲೂ ಜತೆಗಿರುತ್ತಾರೆ. ಅಂಥವರೆಲ್ಲ ಸಾಯೋದಿಲ್ಲ. ಸಾಯೋದಕ್ಕೆ ಸಾಧ್ಯವೂ ಇಲ್ಲ. ಅವರ ನಡೆ, ನುಡಿ, ಆದರ್ಶಗಳಿಂದ ನೆನಪಾಗುತ್ತಲೇ ಇರುತ್ತಾರೆ. ಅಂಬರೀಷ್ ಅವರ ಮಾತು ಒರಟಿರಬಹುದು. ಆದರೆ, ಅವರ ಮನಸ್ಸು ಬೆಲ್ಲದಂಥದ್ದು. ಅವರ ಜತೆಗಿನ ಮಾತುಕತೆ, ಊಟ ಸದಾ ನೆನಪಿಗೆ ಬರುತ್ತಲೇ ಇರುತ್ತದೆ. ಇಂಥ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಅಂಬರೀಷ್​ರಂಥವರ ಅವಶ್ಯಕತೆ ಹೆಚ್ಚಿತ್ತು. ಅಂಥದ್ದೊಂದು ಶಕ್ತಿ ಬೇಕಿತ್ತು. ಅವರು ಇದ್ದಿದ್ದರೆ, ಕನ್ನಡ ಚಿತ್ರರಂಗವನ್ನು ಇನ್ನಷ್ಟು ಒಟ್ಟುಗೂಡಿಸುತ್ತಿದ್ದರು. ಕಾರ್ವಿುಕರಿಗೆ ಇನ್ನಷ್ಟು ನೆರವಾಗುತ್ತಿದ್ದರು. ಹಾಗಂತ ನೆರವು ಸಿಗುತ್ತಿಲ್ಲ ಎಂದಲ್ಲ. ಬೇರೆ ಕಲಾವಿದರು ಸಹ ಸಹಾಯ ಮಾಡುತ್ತಲೇ ಇದ್ದಾರೆ. ಈಗ ಒಂದೊಂದೇ ಬೆರಳು ಕೊಡುತ್ತಿದೆ. ಅಂಬರೀಷ್ ಇದ್ದಿದ್ದರೆ, ಈ ಐದೂ ಬೆರಳುಗಳನ್ನು ಒಟ್ಟಿಗೆ ಸೇರಿಸಿ, ಬೊಗಸೆ ಕೊಟ್ಟ ಹಾಗೆ ಆಗುತಿತ್ತು.

| ದೊಡ್ಡಣ್ಣ ಹಿರಿಯ ನಟ

ಸ್ನೇಹಜೀವಿ ಅಂಬರೀಷ್

‘ನಾಗರಹಾವು’ ಚಿತ್ರದ ಮೂಲಕ ಅಂಬರೀಷ್ ಚಿತ್ರರಂಗಕ್ಕೆ ಬಂದಾಗಿನಿಂದ ನನಗೆ ಪರಿಚಯ. ಅವನು ಚಿತ್ರರಂಗಕ್ಕೆ ಬರಬೇಕು ಅಂತ ಬಂದವನಲ್ಲ. ಯಾವುದೇ ಸಿದ್ಧತೆ ಸಹ ಮಾಡಿಕೊಂಡವನಲ್ಲ. ಅವನೊಬ್ಬ ಹುಡುಗಾಟದ ಹುಡುಗ. ಮಗು ಸ್ವಭಾವದವನು. ಎಲ್ಲರೂ ಬೆಳೆಯಬೇಕು ಅಂತ ಅವನ ಆಸೆ. ಯಾರ ಬಗ್ಗೆಯೂ ಸ್ವಲ್ಪವೂ ಈರ್ಷ್ಯೆ ಇರಲಿಲ್ಲ. ‘ಅಂತ’ ಮೂಲಕ ಅವನು ಹೀರೋ ಆಗೋಕೆ ಮುಂಚೆ ಹಲವು ಚಿತ್ರಗಳಲ್ಲಿ ನಟಿಸಿದ್ದ. ಆ ತರಹ ಕಾಣಿಸಿಕೊಳ್ಳಬೇಕು, ಈ ತರಹ ಮಿಂಚಬೇಕು ಎಂದು ಅವನು ಯೋಚಿಸಿದವನೇ ಅಲ್ಲ. ಬಹಳಷ್ಟು ಸಿನಿಮಾಗಳನ್ನು ಸ್ನೇಹಕ್ಕೋಸ್ಕರವೇ ಮಾಡಿದ. ಶೂಟಿಂಗ್​ಗೆ ಬಾ ಎಂದರೆ, ಏನು-ಎತ್ತ ಕೇಳುತ್ತಿರಲಿಲ್ಲ. ಸೀದಾ ಬರುತ್ತಿದ್ದ. ಕೊಟ್ಟ ಬಟ್ಟೆ ಹಾಕಿಕೊಂಡು, ಪಾರ್ಟು ಮಾಡಿ ಹೊರಟು ಹೋಗುತ್ತಿದ್ದ. ಅಂಥ ಸ್ನೇಹಜೀವಿ ಆತ.

| ಶಿವರಾಮ್ ಹಿರಿಯ ನಟ

| ಚೇತನ್​ ನಾಡಿಗೇರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net