

ಇಂದು (ಶುಕ್ರವಾರ) ಅಂಬರೀಷ್ ಅವರ 69ನೇ ಹುಟ್ಟುಹಬ್ಬ. ಅವರಿಲ್ಲದ ಎರಡನೆಯ ಹುಟ್ಟುಹಬ್ಬ. ಅಂಬರೀಷ್ ಅಗಲಿಕೆಯ ಈ ಒಂದೂವರೆ ವರ್ಷಗಳಲ್ಲಿ ಅವರನ್ನು ಕನ್ನಡಿಗರು ನೆನಪಿಸಿಕೊಳ್ಳದ ದಿನಗಳೇ ಇಲ್ಲ. ಅದರಲ್ಲೂ ಈ ಸಂದರ್ಭದಲ್ಲಿ ಅವರು ಸ್ವಲ್ಪ ಜಾಸ್ತಿಯೇ ನೆನಪಾಗುತ್ತಿದ್ದಾರೆ. ಬಹುಶಃ ಈ ಲಾಕ್ಡೌನ್ ಸಮಯದಲ್ಲಿ ಅವರು ಇದ್ದಿದ್ದರೆ, ಕಾರ್ವಿುಕರು ಮತ್ತು ತಂತ್ರಜ್ಞರು ಇಷ್ಟೊಂದು ಸಮಸ್ಯೆ ಎದುರಿಸಬೇಕಾಗಿರಲಿಲ್ಲವೇನೋ? ತಮ್ಮ ಶಕ್ತಿ ಬಳಸಿ ಕಷ್ಟದಲ್ಲಿ ಇರುವವರು, ಸ್ವಲ್ಪ ನೆಮ್ಮದಿ ಆಗಿರುವಂತೆ ನೋಡಿಕೊಳ್ಳುತ್ತಿದ್ದರೇನೋ? ಬರೀ ಇದೊಂದೇ ಕಾರಣಕ್ಕೆ ಅಲ್ಲ, ಅಂಬರೀಷ್ ಅವರು ತಮ್ಮ ಮಾತು, ಗುಣ, ವ್ಯಕ್ತಿತ್ವ, ಸ್ನೇಹಪರತೆ, ಚಿತ್ರಗಳು, ಅಭಿನಯ... ಹೀಗೆ ಹಲವು ವಿಷಯಗಳಿಂದ ಸುದ್ದಿಯಾಗಿದ್ದವರು. ಅವರ ಈ ಹುಟ್ಟುಹಬ್ಬದ ನೆನಪಲ್ಲಿ, ಕನ್ನಡ ಚಿತ್ರರಂಗದ ಹಲವು ಗಣ್ಯರು, ಅಂಬರೀಷ್ ಅವರನ್ನು ಬೇರೆಬೇರೆ ಕಾರಣಕ್ಕೆ ನೆನಪಿಸಿಕೊಂಡಿದ್ದಾರೆ.
ಬೇರೆ ಧೈರ್ಯ ಬೇಕು
ಅಂಬರೀಷ್ ರೆಬೆಲ್ ಪಾತ್ರಗಳಿಂದ ಗುರುತಿಸಿಕೊಂಡರೂ, ಎಲ್ಲ ಥರದ ಪಾತ್ರಗಳನ್ನೂ ಮಾಡಿದರು. ‘ಅಂತ’ದಲ್ಲಿ ಕನ್ವರ್ಲಾಲ್ ಎಂಬ ವಿಭಿನ್ನ ಪಾತ್ರ ಮಾಡುವುದರ ಜತೆಗೆ, ‘ಶುಭಮಂಗಳ’ದಲ್ಲಿ ಮೂಕನ ಪಾತ್ರ ಮಾಡಿದರು. ಇನ್ನು ‘ಮಸಣದ ಹೂ’ ಚಿತ್ರದಲ್ಲಿ ಅವರು ಮಾಡಿದ ಪಾತ್ರ ಮಾಡುವುದಕ್ಕೆ ಬಹಳಷ್ಟು ಜನ ಹೆದರುತ್ತಾರೆ. ಆದರೆ, ಅಂಬರೀಷ್ ಆ ಪಾತ್ರದಲ್ಲೂ ಸೈ ಎನಿಸಿಕೊಂಡರು. ಇನ್ನು ಅವರಷ್ಟು ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸಿರುವ ನಟ ಸಿಗುವುದು ಕಷ್ಟ. ‘ಜತೆಗೆ ಹೀರೋ ಯಾರೇ ಇರಲಿ, ನಾನು ಪಾತ್ರ ಮಾಡುತ್ತೇನೆ’ ಎಂದು ಚಿತ್ರ ಮಾಡುವುದಕ್ಕೆ ಬೇರೆ ಧೈರ್ಯ ಬೇಕು. ಅಂಬರೀಷ್ ಚಿತ್ರಜೀವನದುದ್ದಕ್ಕೂ, ಅಂಥ ಧೈರ್ಯವನ್ನು ಪ್ರದರ್ಶಿಸಿಕೊಂಡೇ ಬಂದವರು.
| ‘ಡಾಲಿ’ ಧನಂಜಯ್
| ಚೇತನ್ ನಾಡಿಗೇರ್