ಹುಟ್ಟುಹಬ್ಬದಂದು ರೆಬೆಲ್ ಸ್ಟಾರ್ ನೆನಪುಗಳು: ಕನ್ನಡಿ ಮುಂದೆ ನಿಂತ ಹಾಗೆ

Ambi
Published on

ಇಂದು (ಶುಕ್ರವಾರ) ಅಂಬರೀಷ್ ಅವರ 69ನೇ ಹುಟ್ಟುಹಬ್ಬ. ಅವರಿಲ್ಲದ ಎರಡನೆಯ ಹುಟ್ಟುಹಬ್ಬ. ಅಂಬರೀಷ್ ಅಗಲಿಕೆಯ ಈ ಒಂದೂವರೆ ವರ್ಷಗಳಲ್ಲಿ ಅವರನ್ನು ಕನ್ನಡಿಗರು ನೆನಪಿಸಿಕೊಳ್ಳದ ದಿನಗಳೇ ಇಲ್ಲ. ಅದರಲ್ಲೂ ಈ ಸಂದರ್ಭದಲ್ಲಿ ಅವರು ಸ್ವಲ್ಪ ಜಾಸ್ತಿಯೇ ನೆನಪಾಗುತ್ತಿದ್ದಾರೆ. ಬಹುಶಃ ಈ ಲಾಕ್​ಡೌನ್ ಸಮಯದಲ್ಲಿ ಅವರು ಇದ್ದಿದ್ದರೆ, ಕಾರ್ವಿುಕರು ಮತ್ತು ತಂತ್ರಜ್ಞರು ಇಷ್ಟೊಂದು ಸಮಸ್ಯೆ ಎದುರಿಸಬೇಕಾಗಿರಲಿಲ್ಲವೇನೋ? ತಮ್ಮ ಶಕ್ತಿ ಬಳಸಿ ಕಷ್ಟದಲ್ಲಿ ಇರುವವರು, ಸ್ವಲ್ಪ ನೆಮ್ಮದಿ ಆಗಿರುವಂತೆ ನೋಡಿಕೊಳ್ಳುತ್ತಿದ್ದರೇನೋ? ಬರೀ ಇದೊಂದೇ ಕಾರಣಕ್ಕೆ ಅಲ್ಲ, ಅಂಬರೀಷ್ ಅವರು ತಮ್ಮ ಮಾತು, ಗುಣ, ವ್ಯಕ್ತಿತ್ವ, ಸ್ನೇಹಪರತೆ, ಚಿತ್ರಗಳು, ಅಭಿನಯ... ಹೀಗೆ ಹಲವು ವಿಷಯಗಳಿಂದ ಸುದ್ದಿಯಾಗಿದ್ದವರು. ಅವರ ಈ ಹುಟ್ಟುಹಬ್ಬದ ನೆನಪಲ್ಲಿ, ಕನ್ನಡ ಚಿತ್ರರಂಗದ ಹಲವು ಗಣ್ಯರು, ಅಂಬರೀಷ್ ಅವರನ್ನು ಬೇರೆಬೇರೆ ಕಾರಣಕ್ಕೆ ನೆನಪಿಸಿಕೊಂಡಿದ್ದಾರೆ.

ಕನ್ನಡಿ ಮುಂದೆ ನಿಂತ ಹಾಗೆ

ಅಂಬರೀಷ್ ಯಾವತ್ತೂ ಹಿಂದೊಂದು, ಮುಂದೊಂದು ಮಾತಾಡಿದ್ದನ್ನು ನಾನು ನೋಡಿಲ್ಲ. ಏನು ಮಾತಾಡುವುದಿದ್ದರೂ ನೇರವಾಗಿ ಮಾತಾಡುತ್ತಿದ್ದರು. ಅವರ ಮುಂದೆ ನಿಂತು ಮಾತಾಡೋಕೆ ಭಯ ಆಗುತಿತ್ತು. ಅವರ ಮುಂದೆ ನಿಂತರೆ, ಕನ್ನಡಿ ಮುಂದೆ ನಿಂತ ಹಾಗೆ ಆಗುತಿತ್ತು. ಏಕೆಂದರೆ, ಕನ್ನಡಿ ಯಾವತ್ತೂ ಸುಳ್ಳು ಹೇಳುವುದಿಲ್ಲ. ಅದೇನಿದ್ದರೂ ನಿಜವನ್ನೇ ಹೇಳುತ್ತದೆ. ಹಾಗೆಯೇ ಅಂಬರೀಷ್ ನೇರವಾಗಿ ಮಾತಾಡುತ್ತಿದ್ದರು. ಒಮ್ಮೆ ರಜನಿಕಾಂತ್ ಬೆಂಗಳೂರಿಗೆ ಬಂದಾಗ, ಅವರನ್ನು ಭೇಟಿ ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದೆವು. ಸಾಧ್ಯವಾಗಲೇ ಇಲ್ಲ. ಕೊನೆಗೆ ಅಂಬರೀಷ್ ಅವರ ಬಳಿ ಕೇಳಿಕೊಂಡಾಗ, ನೇರವಾಗಿ ರಜನಿಕಾಂತ್ ಮ್ಯಾನೇಜರ್​ಗೆ ಫೋನ್ ಮಾಡಿ, ಭೇಟಿ ಮಾಡುವುದಕ್ಕೆ ಅವಕಾಶ ಮಾಡಿಸಿಕೊಟ್ಟರು. ಈ ಥರ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ.

| ‘ದುನಿಯಾ’ ವಿಜಯ್

|ಚೇತನ್​ ನಾಡಿಗೇರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net