ನಾಗಾರ್ಜುನ್ ಅಭಿನಯದ ಘೋಸ್ಟ್​ಗೆ ಅಮಲಾ ನಾಯಕಿ

Amala
Published on

ಒಂದು ವಾರ ಕಾಲ ಚಿತ್ರೀಕರಣದಲ್ಲೂ ಭಾಗವಹಿಸಿದ್ದರಂತೆ ಕಾಜಲ್ ಅಗರ್​ವಾಲ್. ಆಮೇಲೆ ಅದೇನಾಯಿತೋ ಏನೋ, ಅವರು ಚಿತ್ರತಂಡದಿಂದ ಹೊರಬಂದರು. ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಅವರು ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಒಬ್ಬರೆಂದರು. ಸಂಭಾವನೆ ಜಾಸ್ತಿ ಕೇಳಿದರು ಎಂದು ಇನ್ನೊಬ್ಬರು ಹೇಳಿದರು. ಕಾರಣ ಏನೇ ಇರಲಿ, ನಾಗಾರ್ಜುನ ಅಭಿನಯದ ‘ಘೋಸ್ಟ್’ನಲ್ಲಿ ಅವರು ನಾಯಕಿಯಾಗಿ ನಟಿಸುತ್ತಿಲ್ಲ. ಕಾಜಲ್ ಬದಲು ಇದೀಗ ಅಮಲಾ ಪಾಲ್ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದು, ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ದೊಡ್ಡ ಸಂಭಾವನೆಯನ್ನೇ ಪಡೆದಿದ್ದಾರಂತೆ ಅಮಲಾ ಪಾಲ್.

ಅಮಲಾ ಕೈಯಲ್ಲಿ ಹೆಚ್ಚು ಚಿತ್ರಗಳೇನಿಲ್ಲ. ಇನ್ನು, ಟಾಲಿವುಡ್​ನಲ್ಲಿ ಅವರಿಗೆ ದೊಡ್ಡ ಬೇಡಿಕೆಯೂ ಇಲ್ಲ. ಹೀಗಿರುವಾಗ, ಅವರು ಕೇಳಿದಷ್ಟು ದೊಡ್ಡ ಸಂಭಾವನೆಯನ್ನು ಚಿತ್ರತಂಡದವರು ಹೇಗೆ ಕೊಡುವುದಕ್ಕೆ ಒಪ್ಪಿಕೊಂಡಿತು ಎಂಬ ಪ್ರಶ್ನೆ ಸಹಜ. 60 ಪ್ಲಸ್ ವಯಸ್ಸಿನ ನಾಯಕರಿಗೆ, ನಾಯಕಿಯರು ಸಿಗುವುದೇ ಕಷ್ಟ. ಅದರಲ್ಲೂ ಒಂದಿಷ್ಟು ಹೆಸರು ಮಾಡಿರುವ ನಟಿಯರು ಸಿಗುವುದು ಇನ್ನೂ ಕಷ್ಟ. ಹಾಗಾಗಿ, ಅವರು ಕೇಳಿದಷ್ಟು ದುಡ್ಡು ಕೊಡಲೇಬೇಕು. ಮೇಲಾಗಿ, ನಾಗಾರ್ಜುನ ಮತ್ತು ಅಮಲಾ ನಡುವೆ ಒಂದಿಷ್ಟು ರೊಮ್ಯಾಂಟಿಕ್ ದೃಶ್ಯಗಳಿವೆಯಂತೆ. ಈ ದೃಶ್ಯಗಳಲ್ಲಿ ಭಾಗವಹಿಸುವುದಕ್ಕೆ ಅಮಲಾ ಹೆಚ್ಚು ಸಂಭಾವನೆ ಕೇಳಿದ್ದು, ಅದಕ್ಕೆ ಚಿತ್ರತಂಡದವರೂ ಒಪ್ಪಿದ್ದಾರಂತೆ. ‘ಘೋಸ್ಟ್’ ಚಿತ್ರದ ಚಿತ್ರೀಕರಣ ಈಗಾಗಲೇ ಹೈದರಾಬಾದ್​ನ ರಾಮೋಜಿ ಫಿಲಂಸಿಟಿಯಲ್ಲಿ ನಡೆಯುತ್ತಿದ್ದು, ವರ್ಷಾಂತ್ಯಕ್ಕೆ ಚಿತ್ರೀಕರಣ ಮುಗಿಯುವ ನಿರೀಕ್ಷೆ ಇದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net