ಮನೆ ಪಾರ್ಟಿಯಲ್ಲಿ ಅಲೋಕ್-ಅದ್ವಿಕಾ

Alok
Published on

ಬೆಂಗಳೂರು: ನಟನೆ, ಸಂಗೀತ ನಿರ್ದೇಶನ, ಗಾಯನ ಸೇರಿ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಅಲೋಕ್ ಅಲಿಯಾಸ್ ಆಲ್ ಓಕೆ, ಇದೀಗ ಪಾರ್ಟಿ ಗುಂಗಿನಲ್ಲಿದ್ದಾರೆ. ಅಂದರೆ, ‘ಹೌಸ್ ಪಾರ್ಟಿ’ ಹೆಸರಿನ ಆಲ್ಬಂ ಹಾಡನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ. ಈ ಹಾಡಿನ ಮೂಲಕ ಮಾಡೆಲ್ ಕಂ ನಟಿ ಅದ್ವಿಕಾ ರೆಡ್ಡಿ ಅವರನ್ನು ಆಲ್ಬಂ ಲೋಕಕ್ಕೆ ಕರೆತರುತ್ತಿದ್ದಾರೆ. 

ಆಲ್ಬಂ ಹಾಡಿನ ಮೂಲಕ ಅಲೋಕ್ ಖ್ಯಾತಿ ಪಡೆದವರು. ಈಗಾಗಲೇ ಅವರ ಸಾಕಷ್ಟು ಹಾಡುಗಳು ಯೂಟ್ಯೂಬ್​ನಲ್ಲಿ ಕೋಟಿಕೋಟಿ ವೀಕ್ಷಣೆ ಪಡೆದಿವೆ. ಇದೀಗ ಕೋವಿಡ್ ಸಂದರ್ಭದಲ್ಲಿನ ಘಟನೆಗಳಿಂದ ಪ್ರೇರಣೆ ಪಡೆದು ‘ಹೌಸ್ ಪಾರ್ಟಿ’ ಹಾಡನ್ನು ಹೊರತರುತ್ತಿದ್ದಾರೆ. ಗುರುವಾರ ಬಿಡುಗಡೆಯಾಗಿರುವ ಈ ಹಾಡಿನಲ್ಲಿ ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಅವರು ತೋರಿಸಿದ್ದಾರೆ. ಈ ಹಾಡಿನ ಬಗ್ಗೆ ಮಾಹಿತಿ ನೀಡುವ ಅಲೋಕ್, ‘ಗೋಕರ್ಣದ ಕಹಾನಿ ಪ್ಯಾರಡೈಸ್ ರೆಸಾರ್ಟ್​ನಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಅದೇ ರೀತಿ ಕಲರ್​ಫುಲ್ ಆಗಿ ಹಾಡು ಮೂಡಿಬಂದಿದೆ’ ಎನ್ನುವ ಅವರು, ‘ಬೇರೆ ಭಾಷೆಗಳ ಆಲ್ಬಂಗಳಿಗೆ ಸಿಗುವ ರೆಸ್ಪಾನ್ಸ್ ಕನ್ನಡದ ಆಲ್ಬಂ ಹಾಡುಗಳಿಗೆ ಸಿಗುತ್ತಿಲ್ಲ. ಆದರೆ, ನಮ್ಮ ಹಾಡುಗಳು ಬೇರಾವ ಭಾಷೆಗಿಂತಲೂ ಕಡಿಮೆಯಿಲ್ಲ. ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ’ ಎಂಬುದು ಅಲೋಕ್ ಕಳವಳ.

‘ಎಲ್ಲಿಯೂ ನಮಗೆ ಶೂಟಿಂಗ್ ಅನಿಸಲಿಲ್ಲ. ಪಾರ್ಟಿ ಮಾಡಿದ ಖುಷಿ ಆಯಿತು’ ಎನ್ನುವ ನಟಿ ಅದ್ವಿಕಾ, ‘ಲೂಸ್ ಮಾದ’ ಯೋಗಿ ನಟನೆಯ ‘ಕಿರಿಕ್ ಶಂಕರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಿರ್ದೇಶನ ಮತ್ತು ನಿರ್ವಣದ ಜವಾಬ್ದಾರಿ ಅಲೋಕ್ ಅವರದ್ದು. ಆಕಾಶ್ ಜೋಷಿ ಛಾಯಾಗ್ರಹದ ಜತೆಗೆ ಸಂಕಲನವನ್ನೂ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net