

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 09ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಯೋಚನೆ ಪ್ರಾರಂಭವಾದಾಗಿನಿಂದ ಬಿಡುಗಡೆಯಾಗುವವರೆಗೂ ಒಟ್ಟು ಎಷ್ಟು ವರ್ಷ ಆಗಿರುತ್ತದೆ ಗೊತ್ತಾ? ಈ ಚಿತ್ರವನ್ನು ಒಪ್ಪಿಕೊಂಡಾಗ ಆಲಿಯಾಗೆ 21 ವರ್ಷ ವಯಸ್ಸಾಗಿತ್ತಂತೆ. ಮುಗಿದಾಗ 28. ಇನ್ನು, ಬಿಡುಗಡೆಯಾಗುವಷ್ಟರಲ್ಲಿ 29 ... ಹಾಗಂತ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಹೇಳಿದ್ದಾರೆ.
‘ಬ್ರಹ್ಮಾಸ್ತ್ರ’ ಚಿತ್ರೀಕರಣದ ಘೋಷಣೆಯಾಗಿದ್ದು 2017ರಲ್ಲಾದರೂ, ಅದಕ್ಕೂ ಮೂರು ವರ್ಷಗಳ ಹಿಂದಿನಿಂದಲೇ ಚಿತ್ರದ ತಯಾರಿ ನಡೆದಿತ್ತಂತೆ. 2017ರಲ್ಲಿ ಘೋಷಣೆಯಾದರೂ 2018ರಲ್ಲಿ ಪ್ರಾರಂಭವಾಗಿ, ಅಂತಿಮವಾಗಿ 2021ಕ್ಕೆ ಮುಗಿದಿದೆ. ಈ ಚಿತ್ರ ಒಪ್ಪಿಕೊಂಡಾಗ, ಆಲಿಯಾ ಆಗಷ್ಟೇ ಚಿತ್ರರಂಗಕ್ಕೆ ಬಂದು ಒಂದೆರಡು ವರ್ಷಗಳಾಗಿದ್ದವಂತೆ. ‘ಹಾಗೆ ಹೊಸಬಳಾಗಿ ಚಿತ್ರತಂಡ ಸೇರಿಕೊಂಡ ಆಲಿಯಾ, ಈಗ ಚಿತ್ರರಂಗದಲ್ಲಿ ಅನುಭವಿಯಾಗಿದ್ದಾಳೆ’ ಎಂದು ಕರಣ್ ಜೋಹರ್ ಹೇಳಿದ್ದಾರೆ.
ಈ ಚಿತ್ರವನ್ನು ಮಾಡಿದ್ದು ಹಣಕ್ಕಾಗಿಯಲ್ಲ ಪ್ಯಾಶನ್ಗಾಗಿ ಎನ್ನುವ ಕರಣ್, ಈ ಚಿತ್ರದಿಂದ ದೊಡ್ಡ ದುಡ್ಡು ವಾಪಸ್ಸು ಬರುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಬರೀ ನಮಗಲ್ಲ, ದೇವರಿಗೂ ಈ ಚಿತ್ರ ಸೂಪರ್ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡುತ್ತಾರೆ. ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಮುಂತಾದವರು ನಟಿಸಿದ್ದು, ಅಯಾನ್ ಮುಖರ್ಜಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.