ಖಾಸಗಿ ಫೋಟೋ ಸೋರಿಕೆ: ನಟಿ ಆಲಿಯಾ ಭಟ್ ಆಕ್ರೋಶ, ದೂರು ದಾಖಲಿಸಿ ಎಂದ ಮುಂಬೈ ಪೊಲೀಸರು

Photo of Bollywood Actress Alia Bhatt
Published on

ಮುಂಬೈ: ಅನುಮತಿಯಿಲ್ಲದೆ ಫೋಟೋಗಳನ್ನು ತೆಗೆದ ನ್ಯೂಸ್​ ಪೋರ್ಟಲ್​ ಒಂದರ ವಿರುದ್ಧ ಬಾಲಿವುಡ್​ ನಟಿ ಆಲಿಯಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ ದಿನದ ಬೆನ್ನಲ್ಲೇ ಫೋಟೋಗ್ರಾಫರ್ಸ್​ ವಿರುದ್ಧ ಔಪಚಾರಿಕ ದೂರು ದಾಖಲಿಸುವಂತೆ ಮುಂಬೈ ಪೊಲೀಸರು ನಟಿಯನ್ನು ಕೇಳಿದ್ದಾರೆ.

ತನ್ನ ಮನೆಯಲ್ಲಿ ಸಮಯ ಕಳೆಯುವಾಗ ತನಗೆ ಗೊತ್ತೇ ಇಲ್ಲದೆ ಫೋಟೋಗಳನ್ನು ತೆಗೆಯಲಾಗಿದೆ ಎಂದು ಆರೋಪ ಮಾಡಿರುವ ಆಲಿಯಾ ಭಟ್​, ಇದು ನಿಜಕ್ಕೂ ಖಾಸಗಿತನದ ಉಲ್ಲಂಘನೆ ಎಂದು ಕರೆದಿದ್ದಾರೆ. ತಾವು ಜಾಲತಾಣದಲ್ಲಿ ಮಾಡಿರುವ ಪೋಸ್ಟ್​ನಲ್ಲಿ ಮುಂಬೈ ಪೊಲೀಸರನ್ನೂ ಆಲಿಯಾ ಟ್ಯಾಗ್​ ಮಾಡಿದ್ದಾರೆ.

ಇದಾದ ಬಳಿಕ ಆಲಿಯಾ ಭಟ್​ರನ್ನು ಸಂಪರ್ಕಿಸಿರುವ ಮುಂಬೈ ಪೊಲೀಸರು, ಈ ಪ್ರಕರಣ ಕುರಿತು ದೂರು ದಾಖಲಿಸುವಂತೆ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಲಿಯಾ, ಈಗಾಗಲೇ ಆಕೆಯ ಪಿಆರ್​ ತಂಡ ಈ ವಿಚಾರವನ್ನು ಬಗೆಹರಿಸಿಕೊಳ್ಳಲು ಸಂಬಂಧಪಟ್ಟ ನ್ಯೂಸ್​ ಪೋರ್ಟಲ್​ ಜೊತೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.

Photo of Bollywood Actress Alia Bhat

ಆಲಿಯಾ ಸೆಲೆಬ್ರಿಟಿಗಳ ಬೆಂಬಲ

ಖಾಸಗಿ ಫೋಟೋ ಕ್ಲಿಕ್ಕಿಸಿದ್ದರ ಬಗ್ಗೆ ಆಲಿಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು ಆಕೆಯ ಪರವಾಗಿ ನಿಂತು, ತಮಗಾದ ಇದೇ ರೀತಿಯ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ, ಜಾಹ್ನವಿ ಕಪೂರ್​, ಅರ್ಜುನ್​ ಕಪೂರ್​, ಸ್ವರಾ ಭಾಸ್ಕರ್​, ಕರಣ್​ ಜೋಹರ್​ ಸೇರಿದಂತೆ ಇತರರು ಆಲಿಯಾಗೆ ಬೆಂಬಲ ಸೂಚಿಸಿ ಪಾಪಾರಾಜಿಗಳ ನಡೆಯನ್ನು ಖಂಡಿಸಿದ್ದಾರೆ.

ಅನುಷ್ಕಾ ಮತ್ತು ಜಾಹ್ನವಿ ಪಾಪಾರಾಜಿಗಳು ಕದ್ದು ಮುಚ್ಚಿ ಸೆರೆಹಿಡಿದ ತಮ್ಮ ಫೋಟೋಗಳನ್ನು ಸಹ ಶೇರ್​ ಮಾಡಿಕೊಂಡು ಈ ರೀತಿ ಮಾಡಬೇಡಿ ಎಂದು ಪಾಪಾರಾಜಿಗಳಿಗೆ ತಿಳಿಹೇಳಿದ್ದಾರೆ.

ಆಲಿಯಾರ ಮುಂದಿನ ಸಿನಿಮಾಗಳು

ಸಿನಿಮಾ ವಿಚಾರಕ್ಕೆ ಬರುವುದಾದರೆ, ಆಲಿಯಾ ಅವರು "ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ" ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ನಿರ್ದೇಶಕ ಕಂ ನಿರ್ಮಾಪಕ ಕರಣ್​ ಜೋಹರ್ ಅವರು ಬಹುದಿನಗಳ ಬಳಿಕ ಮತ್ತೆ ನಿರ್ದೇಶಕ ಕ್ಯಾಪ್​ ಧರಿಸಿದ್ದಾರೆ. ಈ ಸಿನಿಮಾದಲ್ಲಿ ರಣವೀರ್​ ಸಿಂಗ್​ ಅವರು ನಾಯಕರಾಗಿದ್ದರೆ. ಹಿರಿಯ ನಟಿ ಜಯಾ ಬಚ್ಚನ್​, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಈ ಸಿನಿಮಾ ಈ ವರ್ಷದ ಜುಲೈನಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

ಇದನ್ನು ಹೊರತುಪಡಿಸಿದರೆ, ಫರ್ಹಾನ್​ ಅಖ್ತಾರ್​ ನಟನೆಯ ಜೀ ಲೇ ಝರಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಸ್​ ಮತ್ತು ಕತ್ರಿನಾ ಕೈಫ್​ ಸಹ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net