ಒಂದು ವರ್ಷ ಮುಂದಕ್ಕೆ ಹೋಯ್ತು ರಣಬೀರ್​-ಆಲಿಯಾ ಮದುವೆ!

Ranbir - Aalia - Final
Published on

ಮದುವೆ ಯಾವಾಗ?

ಕಳೆದ ವರ್ಷ ರಣಬೀರ್​ ಮತ್ತು ಆಲಿಯಾ ಭಟ್​ ಅವರನ್ನು ಈ ಪ್ರಶ್ನೆ ಅದೆಷ್ಟು ಜನ ಕೇಳಿದ್ದಾರೋ ಗೊತ್ತಿಲ್ಲ. ಏಕೆಂದರೆ, ಅವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿತ್ತು. ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಸಹ ಇತ್ತು. ಹಾಗಾಗಿಯೇ ಅವರ ಮದುವೆ ಯಾವಾಗ ಎಂಬ ಕುತೂಹಲ ಎಲ್ಲರಲ್ಲೂ ಇತ್ತು.

ಹೀಗೆ ಮದುವೆ ಯಾವಾಗ ಎಂದು ಕೇಳಿದವರಿಗೆಲ್ಲಾ, 2020ರ ಡಿಸೆಂಬರ್​ನಲ್ಲಿ ಎಂದು ರಣಬೀರ್​ ಮತ್ತು ಆಲಿಯಾ ಸಹ ಹೇಳಿಕೊಂಡು ಬಂದಿದ್ದರು. ಸದ್ಯಕ್ಕೆ ಒಪ್ಪಿರುವ ಚಿತ್ರಗಳನ್ನೆಲ್ಲಾ ಮುಗಿಸಿ, ಆಮೇಲೆ ನೆಮ್ಮದಿಯಾಗಿ ಮದುವೆಯಾಗುವ ಯೋಚನೆ ಇಬ್ಬರಲ್ಲೂ ಇತ್ತು. ಅದೇ ಕಾರಣಕ್ಕೆ ಈ ಡಿಸೆಂಬರ್​ನಲ್ಲಿ ಮದುವೆ ಫಿಕ್ಸ್​ ಆಗಿತ್ತು. ಈಗ ಅನಾಮತ್ತು ಒಂದು ವರ್ಷ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ.

ಪ್ರಮುಖವಾಗಿ, ಈ ವರ್ಷದ ಏಪ್ರಿಲ್​ ತಿಂಗಳಲ್ಲಿ ರಣಬೀರ್ ಕಪೂರ್​ ಅವರ ತಂದೆ ರಿಷಿ ಕಪೂರ್ ನಿಧನವಾಯಿತು. ಹಾಗಾಗಿ ಸಹಜವಾಗಿಯೇ ಒಂದು ವರ್ಷ ಮುಂದಕ್ಕೆ ಹೋಗಿತ್ತು ಮದುವೆ. ಜೂನ್​ ನಂತರ ರಣಬೀರ್​ ಮತ್ತು ಆಲಿಯಾ ಅವರ ಮದುವೆ ಆಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಈಗ ನೋಡಿದರೆ, 2021ರ ಡಿಸೆಂಬರ್​ ಹೊತ್ತಿಗೆ ಮದುವೆ ಆಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಹೀಗೆ ಒಂದು ವರ್ಷ ಮುಂದಕ್ಕೆ ಹೋಗುತ್ತಿರುವುದಕ್ಕೂ ಕಾರಣವಿದೆ. ರಣಬೀರ್​ ಮತ್ತು ಆಲಿಯಾ ಇಬ್ಬರ ಕೈಯಲ್ಲೂ ಸಾಕಷ್ಟು ಮೂರ್ನಾಲ್ಕು ಚಿತ್ರಗಳಿದ್ದು, ಮೊದಲಿಗೆ ಅದನ್ನೆಲ್ಲಾ ಮುಗಿಸಬೇಕಿದೆ. ಸದ್ಯ ಕರೊನಾ ಹಾವಳಿ ಹೆಚ್ಚಿರುವುದರಿಂದ ಇಬ್ಬರೂ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಸೆಪ್ಟೆಂಬರ್​ನಿಂದ ಇಬ್ಬರೂ ಶೂಟಿಂಗ್​ನಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಹಾಗೊಂದು ಪಕ್ಷ ಸೆಪ್ಟೆಂಬರ್​ನಿಂದ ಚಿತ್ರೀಕರಣ ಪ್ರಾರಂಭಿಸಿದರೂ, ಒಪ್ಪಿಕೊಂಡಿರುವ ಚಿತ್ರಗಳನ್ನೆಲ್ಲಾ ಮುಗಿಸುವುದಕ್ಕೆ ಒಂದು ವರ್ಷ ಕಾಲ ಬೇಕಂತೆ. ಹಾಗಾಗಿ 2021ರ ಡಿಸೆಂಬರ್​ಗೆ ಮದುವೆ ಮುಂದೂಡಲಾಗಿದೆಯಂತೆ. ಅಷ್ಟೇ ಅಲ್ಲ, ಇದಕ್ಕೂ ಮುನ್ನ, ಖ್ಯಾತ ಡಿಸೈನರ್​ ಸಬ್ಯಸಾಚಿ ಅವರಿಗೆ ಮದುವೆಯ ಲೆಹಂಗಾ ಹೊಲೆದುಕೊಡಿ ಎಂದು ಆಲಿಯಾ ಕೇಳಿದ್ದರಿಂತೆ. ಈಗ ನೋಡಿದರೆ, ಸದ್ಯಕ್ಕೆ ಕೆಲಸ ಶುರು ಮಾಡಬೇಡಿ, ಮುಂದಿನ ವರ್ಷ ನೋಡೋಣ ಎಂದು ಹೇಳಿದ್ದಾರಂತೆ.

ಹಾಗಾಗಾಗಿಯೇ ರಣಬೀರ್​ ಮತ್ತು ಆಲಿಯಾ ಅವರ ಮದುವೆ ಒಂದು ವರ್ಷ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಒಂದು ವರ್ಷ ಸಮಯವಿರುವುದರಿಂದ, ಈಗಲೇ ದಿನಾಂಕ ಎಲ್ಲಾ ನಿಗದಿಯಾಗಿಲ್ಲ. ಮದುವೆ ದಿನಾಂಕ ಯಾವಾಗ ಎಂದು ಗೊತ್ತಾಗಬೇಕಿದ್ದರೆ, ಇನ್ನೂ ಆರು ತಿಂಗಳಾದರೂ ಕಾಯಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net