ಸೂಸೈಡ್​ ಆರ್​ ಮರ್ಡರ್​: ಸುಶಾಂತ್​ ಪಾತ್ರಧಾರಿಗೆ ನೋಟಿಸ್​ ...

Sachin Tiwari - Final
Published on

ಸುಶಾಂತ್​ ಸಿಂಗ್ ರಜಪೂತ್​ರಂತೆಯೇ ಕಾಣುತ್ತಾರೆ ಎನ್ನಲಾದ ಸಚಿನ್​ ತಿವಾರಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನಿರ್ಮಾಪಕರೊಬ್ಬರು ನೋಟಿಸ್​ ಕಳಿಸಿದ್ದು, ಇದಕ್ಕೆ ಸಚಿನ್​ ಯಾವ ಉತ್ತರ ಕೊಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ಸುಶಾಂತ್​ ಸಿಂಗ್ ಆತ್ಮಹತ್ಯೆಯ ನಂತರ ಅವರ ಕುರಿತಾದ 'ಸೂಸೈಡ್​ ಆರ್​ ಮರ್ಡರ್​' ಎಂಬ ಚಿತ್ರದಲ್ಲಿ ಸಚಿನ್​ ತಿವಾರಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿಬಿದ್ದಿತ್ತು. ಈ ಚಿತ್ರ ಶುರುವಾಗುವ ಮುನ್ನವೇ, ಸಚಿನ್​ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪ್ರಮುಖವಾಗಿ ನಿರ್ಮಾಪಕ ಮಾರುತ್​ ಸಿಂಗ್​ ಮತ್ತು ನಿರ್ದೇಶಕ ಸನೋಜ್​ ಮಿಶ್ರಾ, ಸಚಿನ್​ ವಿರುದ್ಧ ನೋಟೀಸ್​ ಕಳಿಸಿದ್ದಾರೆ.

ಇದಕ್ಕೂ ಮುನ್ನ ಸಚಿನ್​ ಅಭಿನಯದಲ್ಲಿ ಮಾರುತ್​ ಮತ್ತು ಸನೋಜ್​ ಒಂದು ಚಿತ್ರ ಮಾಡಬೇಕು ಎಂದು ಹೊರಟಿದ್ದರಂತೆ. ಅದು ಸುಶಾಂತ್​ ಮತ್ತು ಬಾಲಿವುಡ್​ನಲ್ಲಿ ಚಾಲ್ತಿಯಲ್ಲಿರುವ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತಾದ ಚಿತ್ರ. ಈ ಚಿತ್ರದಲ್ಲಿ ನಟಿಸುವುದಕ್ಕೆ ಸಚಿನ್​ ಸಹ ಒಪ್ಪಿಕೊಂಡಿದ್ದರಂತೆ.

ಆದರೆ, ಅದೇನಾಯಿತೋ ಗೊತ್ತಿಲ್ಲ. ಸಚಿನ್​ ಸದ್ದಿಲ್ಲದೆ ಈ ಕಥೆಯನ್ನು ಇನ್ನೊಬ್ಬ ನಿರ್ಮಾಪಕರಿಗೆ ಲೀಕ್​ ಮಾಡಿ, ಅವರು, 'ಸೂಸೈಡ್​ ಆರ್​ ಮರ್ಡರ್​' ಚಿತ್ರವನ್ನು ಘೋಷಿಸಿಬಿಟ್ಟಿದ್ದಾರೆ. ಸುಶಾಂತ್​ ಕುರಿತು ಸಚಿನ್​ ಅಭಿನಯದಲ್ಲಿ ಚಿತ್ರ ಮಾಡಬೇಕು ಎಂದು ಮಾರುತ್​ ಮತ್ತು ಸನೋಜ್​ ಕಾದಿದ್ದಷ್ಟೇ ಬಂತು. ಆದರೆ, ಅಷ್ಟರಲ್ಲಿ ಬೇರೆ ಯಾರೋ ತಯಾರಿ ನಡೆಸಿಬಿಟ್ಟಿದ್ದರು.

ಹೇಗೆ ಎಂದು ಹುಡುಕಹೊರಟಾಗ, ಆ ನಿರ್ಮಾಪಕರಿಗೆ ಸಚಿನ್​ ತಿವಾರಿಯೇ ಕಥೆ ಹೇಳಿರುವ ರಹಸ್ಯ ಹೊರಬಿದ್ದಿದೆ. ಈ ವಿಷಯದ ಕುರಿತಾಗಿ ಸಚಿನ್​ಗೆ ಫೋನ್​ ಮಾಡಿದರೆ, ಅವರು ಫೋನ್​ ಎತ್ತುತ್ತಿಲ್ಲವಂತೆ. ಇನ್ನು ಕಾದು ಪ್ರಯೋಜನವಿಲ್ಲ ಎಂದು ನೋಟಿಸ್​ ಕಳಿಸಿದರೆ, ಒಂದು ತಿಂಗಳಾದರೂ ಅದಕ್ಕೂ ಉತ್ತರವಿಲ್ಲವಂತೆ.

ಈಗ ಮುಂದೇನು ಮಾಡಬಹುದು ಎಂದು ಗೊತ್ತಾಗದೆ ಮಾರುತ್​ ಮತ್ತು ಸನೋಜ್​ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಈ ಕಡೆ ಕಥೆಯೂ ಹೋಯಿತು, ಆ ಕಡೆ ಹೀರೋ ಸಹ ಸಿಗುತ್ತಿಲ್ಲ. ಈ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net