

ಲಾಕ್ಡೌನ್ ಮುಗಿದು ಹಲವು ದಿನಗಳಾದರೂ, ಅದೇನೋ ಬಾಲಿವುಡ್ ಮಂದಿ ಮಾತ್ರ ಅದರಿಂದ ಹೊರಬರುವಂತೆ ಕಾಣುತ್ತಿಲ್ಲ. ಇನ್ನೂ ಮನೆಯಲ್ಲೇ ಕುಳಿತಿರುವ ಹಲವರು, ಅದ್ಯಾಕೋ ಚಿತ್ರೀಕರಣ ಪ್ರಾರಂಭಿಸುವ ಮನಸ್ಸೇ ಮಾಡುತ್ತಿಲ್ಲ.
ಹೀಗಿರುವಾಗಲೇ, ಜಾನ್ ಅಬ್ರಹಾಂ ಮತ್ತು ಅದಿತಿ ರಾವ್ ಹೈದರಿ ಇಬ್ಬರೂ ಹೊಸ ಚಿತ್ರವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಸೋಮವಾರದಿಂದ ಚಿತ್ರೀಕರಣ ಪ್ರಾರಂಭವಾಗಿದ್ದು, ಸುಮಾರು ಹತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಜಾನ್ ಮತ್ತು ಅದಿತಿ ಅವರ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ.
ಅಂದಹಾಗೆ, ಈ ಹೆಸರಿಡದ ಚಿತ್ರದ ಹೀರೋ ಜಾನ್ ಅಬ್ರಹಾಂ ಅಲ್ಲ ಎಂಬುದು ಗೊತ್ತಿರಲಿ. ಈ ಚಿತ್ರದಲ್ಲಿ ಅರ್ಜುನ್ ಕಪೂರ್ ನಾಯಕನಾಗಿ ನಟಿಸಿದ್ದು, ಅವರ ಅಜ್ಜ-ಅಜ್ಜಿಯಾಗಿ ಜಾನ್ ಮತ್ತು ಅದಿತಿ ನಟಿಸುತ್ತಿದ್ದಾರಂತೆ. ಹಾಗಂತ ಈ ಮೂವರೂ ಮುಖಾಮುಖಿಯಾಗುವುದಿಲ್ಲವಂತೆ. ಏಕೆಂದರೆ, ಜಾನ್ ಮತ್ತು ಅದಿತಿ ಅವರ ಎಪಿಸೋಡ್, ಫ್ಲಾಶ್ಬ್ಯಾಕ್ನಲ್ಲಿ ಬರುತ್ತದಂತೆ.
ವಿಶೇಷವೆಂದರೆ, ಇವರಿಬ್ಬರ ಟ್ರ್ಯಾಕ್ 40ರ ದಶಕದ್ದಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನಡೆಯುವ ಕಥೆಯಾಗಿರುತ್ತದಂತೆ. ಚಿತ್ರದ ಒಂದು ಭಾಗದಲ್ಲಿ ಜಾನ್ ಮತ್ತು ಅದಿತಿ ಅವರ ಟ್ರ್ಯಾಕ್ ಬರಲಿದ್ದು, ಚಿತ್ರದ ಹೈಲೈಟ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ …
ಈ ಚಿತ್ರದಲ್ಲಿ ಜಾನ್ ಅಬ್ರಹಾಂ ವಿಶೇಷ ಪಾತ್ರ ಮಾಡುತ್ತಿರುವುದಷ್ಟೇ ಅಲ್ಲ, ಚಿತ್ರದ ನಿಮಾರ್ಪಕರಲ್ಲೊಬ್ಬರು. ಈ ಕಥೆಯ ಫ್ಲಾಶ್ಬ್ಯಾಕ್ ಎಪಿಸೋಡ್ನಲ್ಲಿ ಒಂದು ಅದ್ಭುತ ಪಾತ್ರವಿದೆ ಮತ್ತು ಅದನ್ನು ನೀವೇ ಮಾಡಬೇಕು ಎಂದು ನಿರ್ದೇಶಕರು ಹೇಳಿದಾಗ, ಜಾನ್ ತಕ್ಷಣವೇ ಒಪ್ಪಿಕೊಂಡರಂತೆ.
ಈ ಚಿತ್ರದಲ್ಲಿ ಅರ್ಜುನ್ಗೆ ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದು, ಇದೊಂದು ಕ್ರಾಸ್ ಬಾರ್ಡರ್ ಲವ್ಸ್ಟೋರಿಯಾಗಿರುತ್ತದೆ ಎಂದು ಹೇಳಲಾಗುತ್ತಿದೆ.