

ಬೆಂಗಳೂರು: ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‍ಗೆ ಒಂದರ ಹಿಂದೊಂದರಂತೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. 'ಸೀತಾಯಣ' ಮತ್ತು 'ಸಮಿತ್' ಚಿತ್ರಗಳ ನಂತರ ಅಕ್ಷಿತ್ ಇದೀಗ 'ಓ ಮೈ ಲವ್' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಇತ್ತೀಚೆಗೆ ಚಿತ್ರದ ಫೋಟೋಶೂಟ್ ಸಹ ಮುಗಿದಿದೆ.
ಅಕ್ಷಿತ್ ಅವರ ಹಿಂದಿನ ಚಿತ್ರಗಳಂತೆ, ಈ ಚಿತ್ರ ಸಹ ಒಂದು ಲವ್ಸ್ಟೋರಿ. ಈ ಹಿಂದೆ 'ತೂಫಾನ್', 'ಬಳ್ಳಾರಿ ದರ್ಬಾರ್' ಹಾಗೂ '18 ಟು 25' ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು, ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಚಿತ್ರಕಥೆಯನ್ನು ಸಹ ರಚಿಸಿದ್ದಾರೆ.
ರೊಮ್ಯಾಂಟಿಕ್ ಜಾನರ್ನ ಈ ಚಿತ್ರದಲ್ಲಿ ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತಾಗಿ ಹೇಳಲಾಗುತ್ತಿದೆ. ಜಿಸಿಬಿ ರಾಮಾಂಜಿನಿ ಅವರು ಈ ಚಿತ್ರದ ಕಥೆ ಬರೆಯುವುದರೊಂದಿಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
ಇದನ್ನೂ ಓದಿ: ವಾಪಸ್ ಬಂದ್ರು ರಂಗೀಲಾ ಬೆಡಗಿ ಊರ್ಮಿಳಾ ಮಾತೊಂಡ್ಕರ್…
ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದು, ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇತರರೂ ಈ ಚಿತ್ರದಲ್ಲಿರುತ್ತಾರೆ. ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತ ಈ ಚಿತ್ರಕ್ಕಿರಲಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.