ಆರು ವರ್ಷದಲ್ಲಿ ಅಕ್ಷಯ್ ಕುಮಾರ್ ಗಳಿಕೆ ಎಷ್ಟು ಸಾವಿರ ಕೋಟಿ ಗೊತ್ತ!!

Akhsy
Published on

ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್​ ಕುಮಾರ್ ವರ್ಷವಿಡೀ ಅತಿ ಹೆಚ್ಚು ಕೆಲಸ ಮಾಡುವ ನಟ. ಹಾಗಾಗಿಯೇ ಅವರ ಸಿನಿಮಾ ಬತ್ತಳಿಕೆ ಸದಾ ತುಂಬಿರುತ್ತದೆ. ಸಾಲು ಸಾಲು ಸಿನಿಮಾ ಘೋಷಣೆ ಮಾಡುತ್ತಲೇ ಇರುತ್ತಾರೆ. ತುಂಬ ಕಡಿಮೆ ಅವಧಿಯಲ್ಲಿಯೇ ಅವುಗಳ ಶೂಟಿಂಗ್​ ಮುಗಿಸಿಕೊಳ್ಳುತ್ತಿರುತ್ತಾರೆ. ಜಾಹೀರಾತು ಕ್ಷೇತ್ರದಲ್ಲಿಯೂ ಸಾಕಷ್ಟು ಬ್ರಾಂಡ್​ಗಳಿಗೆ ರಾಯಭಾರಿ ಸಹ ಆಗಿದ್ದಾರೆ. ಹಾಗಾದರೆ ಅವರ ಗಳಿಕೆ ಎಷ್ಟಿರಬಹುದು? ಈ ಪ್ರಶ್ನೆಗೆ ಉತ್ತರವೊಂದು ಸಿಕ್ಕಿದೆ.

ಹೌದು, ಅಮೆರಿಕನ್ ಬಿಸಿನೆಸ್​ ಫೋರ್ಬ್ಸ್​ ಸಂಸ್ಥೆ ಅಕ್ಷಯ್​ ಕುಮಾರ್ ಅವರ ಆರು ವರ್ಷದ ಒಟ್ಟಾರೆ ಗಳಿಕೆಯನ್ನು ಅಂಕಿ ಅಂಶದ ಮೂಲಕ ಬಹಿರಂಗಪಡಿಸಿದೆ. 2015ರಲ್ಲಿ 208 ಕೋಟಿ, 2016ರಲ್ಲಿ 211 ಕೋಟಿ, 2017ರಲ್ಲಿ 231 ಕೋಟಿ, 2018ರಲ್ಲಿ 277 ಕೋಟಿ, 2019ರಲ್ಲಿ 459 ಕೋಟಿ ಮತ್ತು 2020ರಲ್ಲಿ 356 ಕೋಟಿ ಸೇರಿ ಒಟ್ಟಾರೆಯಾಗಿ ಆರು ವರ್ಷದ ಅವಧಿಯಲ್ಲಿ 1744ಕೋಟಿ ರೂ. ಗಳಿಕೆ ಅಕ್ಷಯ್​ ಕುಮಾರ್ ಅವರದ್ದು.

ವರ್ಷಕ್ಕೆ ಏನಿಲ್ಲವೆಂದರೂ ಅಕ್ಷಯ್​ ಕುಮಾರ್ ನಟನೆಯ ಮೂರ್ನಾಲ್ಕು ಸಿನಿಮಾಗಳು ಬಿಡುಗಡೆ ಆಗುತ್ತವೆ. ಆದರೆ, 2020ರಲ್ಲಿ ಅವರ ಒಂದೇ ಒಂದು ಸಿನಿಮಾ ಮಾತ್ರ ತೆರೆಗೆ ಬಂದಿತ್ತು. ಲಕ್ಷ್ಮೀ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆದರೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಂದಹಾಗೆ, ಈ ಮೇಲಿನ ಗಳಿಕೆ ಕೇವಲ ಸಿನಿಮಾಗಳಿಂದ ಬಂದಿರುವುದಲ್ಲ. ಇದರಲ್ಲಿ ಅವರು ಕಾಣಿಸಿಕೊಂಡ ಜಾಹೀರಾತುಗಳ ಆದಾಯವೂ ಸೇರಿದೆ.

ಸದ್ಯ ಅಕ್ಷಯ್ ಕುಮಾರ್ ಪೃಥ್ವಿರಾಜ್, ಅತರಂಗಿ ರೇ, ಬಚ್ಚನ್ ಪಾಂಡೆ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದು, ಇದು ಮುಗಿಯುತ್ತಿದ್ದಂತೆ ಇನ್ನೂ ಮೂರು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗಳ ಕೆಲಸದಲ್ಲಿಯೂ ಅವರು ಭಾಗಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net