ಕಂಗನಾ ಚಿತ್ರಕ್ಕೆ ಜಪಾನ್​ ಛಾಯಾಗ್ರಾಹಕ ...

Dhaakad - Final
Published on

ಮುಂಬೈ: 'ತಲೈವಿ' ಚಿತ್ರದ ಚಿತ್ರೀಕರಣ ಮುಗಿಸಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​, ಇದೀಗ 'ತೇಜಸ್​' ಮತ್ತು 'ಧಾಕಡ್​' ಚಿತ್ರಗಳಿಗೆ ತಯಾರಾಗುತ್ತಿದ್ದಾರೆ. ಈಗಾಗಲೇ 'ತೇಜಸ್​' ಸಂಬಂಧವಾಗಿ ಅವರು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರನ್ನು ಸಹ ಭೇಟಿ ಮಾಡಿ ಬಂದಿದ್ದಾರೆ.

ಈ ಮಧ್ಯೆ, 'ಧಾಕಡ್​' ಚಿತ್ರದ ಕೆಲಸಗಳು ಸಹ ಶುರುವಾಗಿದ್ದು, ಮೊದಲು ಅದೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪೈ ಥ್ರಿಲ್ಲರ್​ ಆಗಲಿದೆ ಎಂದು ಕಂಗನಾ ಹೇಳಿಕೊಂಡಿದ್ದು, ಈ ಚಿತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ನರು ಕೆಲಸ ಮಾಡಲಿದ್ದಾರೆ ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ.

ಈ ವಿಷಯವಾಗಿ ಅವರು ಭಾನುವಾರ ಒಂದು ಟ್ವೀಟ್​ ಮಾಡಿದ್ದು, ಅದರಲ್ಲಿ ಜಪಾನ್​ನ ಖ್ಯಾತ ಛಾಯಾಗ್ರಾಹಕ ಟೆಟ್ಸುವೋ ನಗಾತಾ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಟೆಟ್ಸುವೋ ಮೂಲತಃ ಜಪಾನವರಾಗಿದ್ದರೂ, ಅವರು ಹೆಚ್ಚು ಕೆಲಸ ಮಾಡಿರುವುದು ಫ್ರೆಂಚ್​ ಸಿನಿಮಾಗಳಲ್ಲಿ. ಅವರು ಇದೀಗ ಮೊದಲ ಬಾರಿಗೆ ಹಿಂದಿ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿರುವುದು ವಿಶೇಷ.

'ನಮ್ಮ 'ಧಾಕಡ್​' ಚಿತ್ರಕ್ಕೆ ಫ್ರೆಂಚ್​ ಛಾಯಾಗ್ರಾಹಕ ಟೆಟ್ಸುವೋ ನಗಾತಾ ಅವರು ಕೆಲಸ ಮಾಡುತ್ತಿದ್ದಾರೆ. 'ಲಾ ವೇ ಎನ್​ ರೋಸ್​' ಚಿತ್ರದಲ್ಲಿನ ಅವರ ಛಾಯಾಗ್ರಹಣ ಇಡೀ ಜಗತ್ತಿಗೇ ಸ್ಫೂರ್ತಿಯಾಗಿದೆ. ಭಾರತದ ಜನಪ್ರಿಯ ಜಾಹೀರಾತು ನಿರ್ದೇಶಕ ರಜನೀಶ್​ ಘಾಯ್​ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪೈ ಥ್ರಿಲ್ಲರ್ ಚಿತ್ರವಾಗಲಿದೆ' ಎಂದು ಟ್ವೀಟ್​ ಮಾಡಿದ್ದಾರೆ.

'ಧಾಕಡ್​' ಚಿತ್ರದಲ್ಲಿ ಅರ್ಜುನ್​ ರಾಂಪಾಲ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಸಾಕಷ್ಟು ತಯಾರಿಯಲ್ಲಿ ಅವರು ನಿರತರಾಗಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net