'ಗೂರ್ಖಾ' ಚಿತ್ರದಿಂದ ಹಿಂದೆ ಸರಿದ ಅಕ್ಷಯ್​ ಕುಮಾರ್​; ಕಾರಣ ಏನು?

Gorkha
Published on

ಮುಂಬೈ: ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್​ನ ಹೆಮ್ಮೆಯ ಅಧಿಕಾರಿ ಮೇಜರ್ ಜನರಲ್​ ಇಯಾನ್​ ಕಾರ್ಡೋಜೋ ಅವರ ಜೀವನವನ್ನಾಧರಿಸಿ 'ಗೂರ್ಖಾ' ಎಂಬ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಿರುವ ಸುದ್ದಿ ಗೊತ್ತಿರಬಹುದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಮಾರ್ಚ್​ನಿಂದ ಆ ಚಿತ್ರದ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ, ಈಗ ಆ ಚಿತ್ರದಿಂದ ಅಕ್ಷಯ್​ ಹೊರಬಂದಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ಹೌದು, 'ಗೂರ್ಖಾ' ಚಿತ್ರದಿಂದ ಅಕ್ಷಯ್​ ಕುಮಾರ್ ಹೊರಬಂದಿದ್ದಾರಂತೆ. ಅದಕ್ಕೆ ಕಾರಣವೂ ಇದೆ. ಯಾವಾಗ ಚಿತ್ರದ ಘೋಷಣೆಯಾಯಿತೋ, ಆಗ ಸಾಕಷ್ಟು ವಿವಾದಗಳು ಎದ್ದವು. ಪ್ರಮುಖವಾಗಿ ಮೇಜರ್​ ಜನರಲ್​ ಕಾರ್ಡೋಜೋ ಮತ್ತು ಅವರ ಸಾಹಸಗಳ ಕುರಿತ ಸತ್ಯಾಸತ್ಯಗಳ ಬಗ್ಗೆ ಚರ್ಚೆಯಾಗಿದ್ದವು.

ಈ ಎಲ್ಲ ವಿವಾದಗಳಿಂದ ಅಕ್ಷಯ್​ ಕುಮಾರ್​ಗೆ ಸಾಕಷ್ಟು ಬೇಸರವಾಗಿದೆ ಎಂದು ಹೇಳಲಾಗುತ್ತಿದೆ. ಸೈನ್ಯದ ಬಗ್ಗೆ ಅಪಾರ ಗೌರವ ಇರುವ ಅಕ್ಷಯ್​ ಕುಮಾರ್​ಗೆ, ಈ ಗೊಂದಲ ಮತ್ತು ಗದ್ದಲಗಳ ನಡುವೆ ಚಿತ್ರ ಮಾಡುವುದಕ್ಕೆ ಇಷ್ಟ ಇರಲಿಲ್ಲವಂತೆ. ಹಾಗಾಗಿ, ಅವರು ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಹೊರನಡೆದಿದ್ದರಿಂದ ಆ ಚಿತ್ರ ಮುಂದುವರೆಯುತ್ತದೋ ಅಥವಾ ಅದನ್ನು ಅಷ್ಟಕ್ಕೇ ನಿಲ್ಲಿಸಲಾಗುತ್ತದೋ ಎಂಬುದರ ಕುರಿತು ಇನ್ನೂ ಚಿತ್ರತಂಡ ಸ್ಪಷ್ಟಪಡಿಸಿಲ್ಲ.

'ಗೂರ್ಖಾ' ಚಿತ್ರವು ಅಕ್ಷಯ್​ ಕುಮಾರ್​ ಅವರ ಫಿಲ್ಮಾಗ್ರಫಿಯಿಂದ ಮೈನಸ್​ ಆದರೂ, ಇನ್ನೊಂದಿಷ್ಟು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಪ್ರಮುಖವಾಗಿ 'ಸೆಲ್ಫಿ', 'ಓ ಮೈ ಗಾಡ್​ 2' ಹಾಗೂ 'ಬಡೆ ಮಿಯಾ ಚೋಟೇ ಮಿಯಾ' ಚಿತ್ರಗಳಲ್ಲಿ ಅವರು ನಟಿಸುತ್ತಿದ್ದು, ಆ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net